ADVERTISEMENT

ಕೊರೊನಾ: ವೈದ್ಯರು, ನರ್ಸ್‌ಗಳಿಗಾಗಿ ಸೋಂಕು ನಿವಾರಕ ಚೇಂಬರ್‌ ಅಭಿವೃದ್ಧಿ

ಮುಖದ ರಕ್ಷಣೆಗೆ ವಿಶೇಷ ಮಾಸ್ಕ್‌ ತಯಾರಿಸಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ

ಪಿಟಿಐ
Published 6 ಏಪ್ರಿಲ್ 2020, 1:21 IST
Last Updated 6 ಏಪ್ರಿಲ್ 2020, 1:21 IST
.
.   

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಕೋವಿಡ್‌–19 ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ, ನರ್ಸ್‌ಗಳಿಗಾಗಿ ಸೋಂಕು ನಿವಾರಕ ಚೇಂಬರ್‌ ಹಾಗೂ ಮುಖಕ್ಕೆ ರಕ್ಷಣೆ ಒದಗಿಸುವ ವಿಶೇಷ ಮಾಸ್ಕ್‌ಅನ್ನು ಅಭಿವೃದ್ಧಿಪಡಿಸಿದೆ.

ಈ ಚೇಂಬರ್‌ಗೆ ಪಿಎಸ್‌ಇ ಎಂದು ಹೆಸರಿಸಲಾಗಿದ್ದು, ಅಹ್ಮದ್‌ನಗರದಲ್ಲಿರುವ ಸಂಸ್ಥೆಯ ವೆಹಿಕಲ್‌ ರಿಸರ್ಚ್‌ ಡೆವಲಪ್‌ಮೆಂಟ್‌ ಎಸ್ಟಾಬ್ಲಿಷ್‌ಮೆಂಟ್‌ನಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ.

ಕೊಠಡಿಯಂತಹ ರಚನೆ ಇರುವ ಈ ಚೇಂಬರ್‌ಅನ್ನು ವ್ಯಕ್ತಿಯೊಬ್ಬರು ಪ್ರವೇಶಿಸಿದ ನಂತರ, ವಿದ್ಯುತ್‌ ಚಾಲಿತ ಪಂಪ್‌ ಕಾರ್ಯಾರಂಭ ಮಾಡುತ್ತದೆ. ಹೈಪೊಸೋಡಿಯಂ ಕ್ಲೋರೈಡ್‌ ದ್ರಾವಣವನ್ನು ಈ ಪಂಪ್‌ ಸಿಂಪಡಣೆ ಮಾಡುತ್ತದೆ. ಇದರಿಂದ ವ್ಯಕ್ತಿಯಲ್ಲಿರಬಹುದಾದ ಸೋಂಕನ್ನು ಹೋಗಲಾಡಿಸಲಾಗುತ್ತದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

‘ಈ ಚೇಂಬರ್‌ಅನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸರಳವಾಗಿ ಸ್ಥಳಾಂತರಿಸಬಹುದಾಗಿದೆ.ಒಬ್ಬ ವ್ಯಕ್ತಿಗೆ 25 ಸೆಕಂಡ್‌ಗಳ ಅವಧಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗುತ್ತದೆ. ಈ ಅವಧಿಯಲ್ಲಿ ಚೇಂಬರ್‌ನಲ್ಲಿರುವ ವ್ಯಕ್ತಿ ಕಣ್ಣು ಮುಚ್ಚಿಕೊಂಡು ನಿಲ್ಲಬೇಕು’ಎಂದೂ ಸಂಸ್ಥೆ ಹೇಳಿದೆ.

ಅಂಕಿ–ಅಂಶ
700 ಲೀ. ದ್ರಾವಣ:
ಚೇಂಬರ್‌ಗೆ ಜೋಡಿಸಿರುವ ಟ್ಯಾಂಕ್‌ನ ಸಂಗ್ರಹ ಸಾಮರ್ಥ್ಯ
650:ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಬಹುದಾದ ಜನರ ಸಂಖ್ಯೆ

ಶುದ್ಧಗೊಂಡ ಯಮುನಾ ನದಿ
ಮಥುರಾ: ಲಾಕ್‌ಡೌನ್‌ ಕಾರಣದಿಂದಾಗಿ ಯಮುನಾ ನದಿಯ ನೀರು ತಿಳಿಯಾಗುತ್ತಿದೆ ಎಂದು ಪರಿಸರ ಹೋರಾಟಗಾರರು ಸಂತಸವ್ಯಕ್ತಪಡಿಸಿದ್ದಾರೆ.

‘ನಲವತ್ತೆರಡು ವರ್ಷಗಳ ನಂತರ ಯಮುನಾ ನದಿಯಲ್ಲಿ ಶುದ್ಧ ನೀರು ನೋಡುವ ಸೌಭಾಗ್ಯ ದೊರಕಿದೆ’ ಎಂದು ಮಥುರಾ ಚತುರ್ವೇದ ಪರಿಷತ್‌ ಉಪಾಧ್ಯಕ್ಷ ರಾಕೇಶ್‌ ತಿವಾರಿ ಹೇಳಿದ್ದಾರೆ.

ಈ ನದಿಯಲ್ಲಿ ಸಾವಿರಾರು ಜನರು ಸ್ನಾನ ಮಾಡುತ್ತಿದ್ದರು. ಹೂವುಗಳು, ಪೂಜಾ ಸಾಮಗ್ರಿಗಳನ್ನು ಎಸೆಯುತ್ತಿದ್ದರು. ಕೈಗಾರಿಕೆಗಳು ಹರಿಬಿಡುತ್ತಿದ್ದ ಕಲುಷಿತ ನೀರಿನಿಂದಾಗಿ ನದಿ ಕಲುಷಿತಗೊಂಡಿತ್ತು.

‘ದೇಶದಲ್ಲಾಗಿರುವ ದಿಢೀರ್‌ ಬೆಳವಣಿಗೆಯಿಂದಾಗಿ ನದಿಗೆ ಕೈಗಾರಿಕೆಗಳಿಂದ ಕಲುಷಿತ ದ್ರಾವಣ ಬರುವುದು ನಿಂತಿದೆ. ಯಮುನೆ ಸ್ವಚ್ಛಗೊಂಡಿದ್ದಾಳೆ’ ಎಂದು ಸಾಮಾಜಿಕ ಹೋರಾಟಗಾರ ಗೋಪೇಶ್ವರ್‌ ನಾಥ್‌ ಚತುರ್ವೇದಿ ಖುಷಿ ಹಂಚಿಕೊಳ್ಳುತ್ತಾರೆ.ಇವರುಯಮುನಾ ನದಿಯನ್ನು ಶುಚಿಗೊಳಿಸಬೇಕು ಎಂದು 1998ರಲ್ಲಿ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಆರೋಗ್ಯ ಸಿಬ್ಬಂದಿಗೆ ವರದಾನ
ಹೈದರಾಬಾದ್‌ ಮೂಲದ ರಿಸರ್ಚ್‌ ಸೆಂಟರ್‌ ಇಮಾರತ್‌ (ಆರ್‌ಸಿಐ), ಚಂಡೀಗಡದ ಟರ್ಮಿನಲ್‌ ಬ್ಯಾಲಿಸ್ಟಿಕ್ಸ್‌ ರಿಸರ್ಚ್‌ ಲ್ಯಾಬೊರೇಟರಿ (ಟಿಬಿಆರ್‌ಎಲ್‌), ಮುಖದ ರಕ್ಷಣೆಗಾಗಿ ಮಾಸ್ಕ್‌ ಅಭಿವೃದ್ಧಿಪಡಿಸಿವೆ.

ಒಎಚ್‌ಪಿ ಸಾಧನದಲ್ಲಿ ಬಳಸುವ ತೆಳುವಾದ ಫಿಲ್ಮ್‌ಅನ್ನು ಬಳಸಿ ಈ ಮಾಸ್ಕ್‌ ತಯಾರಿಸಲಾಗಿದ್ದು, ಇವು ಧರಿಸಲು ಸರಳ ಹಾಗೂ ಹಗುರ ಸಹ ಇರುವುದರಿಂದ ಆರೋಗ್ಯ ಸೇವೆಯಲ್ಲಿ ನಿರತ ಸಿಬ್ಬಂದಿಗೆ ವರದಾನವಾಗಿವೆ ಎಂದು ಡಿಆರ್‌ಡಿಒ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.