
ಜಮ್ಮು: ಪಾಕಿಸ್ತಾನದಿಂದ ಡ್ರೋನ್ ಮೂಲಕ ಎಸೆದಿದ್ದ ಶಸ್ತ್ರಾಸ್ತ್ರಗಳನ್ನು ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯ ಬಳಿ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಮುಂಬರುವ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಡ್ಡಿಪಡಿಸಲು ಭಯೋತ್ಪಾದಕರು ನಡೆಸಬಹುದಾದ ಯಾವುದೇ ಪ್ರಯತ್ನಗಳನ್ನು ತಡೆಯಲು ಬಿಗಿ ಭದ್ರತೆ ಕಲ್ಪಿಸಿರುವ ನಡುವೆಯೆ ಈ ಘಟನೆ ನಡೆದಿದೆ.
ವಶಕ್ಕೆ ಪಡೆದಿರುವ ಶಸ್ತ್ರಾಸ್ತ್ರಗಳಲ್ಲಿ ಎರಡು ಪಿಸ್ತೂಲ್‌ಗಳು, ಮೂರು ಮ್ಯಾಗಜೀನ್‌ಗಳು, 16 ಸುತ್ತುಗಳ ಗುಂಡುಗಳು ಮತ್ತು ಒಂದು ಗ್ರೆನೇಡ್ ಇದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಾಚೆಯಿಂದ ಶಂಕಿತ ಡ್ರೋನ್‌ನ ಚಲನೆಯ ಬಗ್ಗೆ ಮಾಹಿತಿ ಪಡೆದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವಿಶೇಷ ಕಾರ್ಯಾಚರಣೆ ಗುಂಪಿನ (ಎಸ್‌ಒಜಿ) ಜಂಟಿ ತಂಡವು ಶುಕ್ರವಾರ ತಡರಾತ್ರಿ ಘಗ್ವಾಲ್‌ನ ಪಲೂರಾ ಗ್ರಾಮದಲ್ಲಿ ಶೋಧ ಪ್ರಾರಂಭಿಸಿತು. ಈ ವೇಳೆ ತಂಡವು ಹಳದಿ ಟೇಪ್‌ನಲ್ಲಿ ಸುತ್ತಿದ್ದ ಪ್ಯಾಕೆಟ್ ಒಂದನ್ನು ಹೊಳೆಯ ದಡದಲ್ಲಿ ಪತ್ತೆಹಚ್ಚಿ, ಬಾಂಬ್ ನಿಷ್ಕ್ರಿಯ ದಳದ ಸಹಾಯದಿಂದ ಅದನ್ನು ತೆರೆದು, ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.