ADVERTISEMENT

ಡ್ರಗ್ಸ್‌ ಜಾಲ: ಅರ್ಜುನ್‌ ರಾಮ್‌ಪಾಲ್‌ ಗೆಳತಿ ಎನ್‌ಸಿಬಿ ವಿಚಾರಣೆಗೆ ಹಾಜರು

ಪಿಟಿಐ
Published 11 ನವೆಂಬರ್ 2020, 9:27 IST
Last Updated 11 ನವೆಂಬರ್ 2020, 9:27 IST
ವಿಚಾರಣೆಗೆ ಹಾಜರಾದ ನಂತರ ಗ್ಯಾಬ್ರಿಯೆಲಾ ಅವರು ಎನ್‌ಸಿಬಿ ಕಚೇರಿಯಿಂದ ತೆರಳಿದರು       –ಪಿಟಿಐ ಚಿತ್ರ
ವಿಚಾರಣೆಗೆ ಹಾಜರಾದ ನಂತರ ಗ್ಯಾಬ್ರಿಯೆಲಾ ಅವರು ಎನ್‌ಸಿಬಿ ಕಚೇರಿಯಿಂದ ತೆರಳಿದರು       –ಪಿಟಿಐ ಚಿತ್ರ   

ಮುಂಬೈ: ಬಾಲಿವುಡ್‌ ನಟ ಅರ್ಜುನ್ ರಾಮ್‌ಪಾಲ್ ‍ಸ್ನೇಹಿತೆ ಗ್ಯಾಬ್ರಿಯೆಲಾ ಡಿಮೆಟ್ರಿಯೇಡ್ಸ್ ಅವರುಬುಧವಾರ ಮಾದಕವಸ್ತು ನಿಯಂತ್ರಣ ದಳದ (ಎನ್‌ಸಿಬಿ) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ದಕ್ಷಿಣ ಮುಂಬೈನ ಬಾರ್ಲಾಡ್‌ ಎಸ್ಟೇನ್‌ನಲ್ಲಿರುವ ಎನ್‌ಸಿಬಿ ಕಚೇರಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಗ್ಯಾಬ್ರಿಯೆಲಾ ಅವರು ಕಾರಿನಲ್ಲಿ ಆಗಮಿಸಿದರು.

ಬಾಲಿವುಡ್‌ ಡ್ರಗ್ಸ್‌ ಜಾಲ ಪ್ರಕರಣದಡಿ ನಟ ಅರ್ಜುನ್ ರಾಮ್‌ಪಾಲ್ ಮುಂಬೈ ನಿವಾಸದ ಮೇಲೆ ಎನ್‌ಸಿಬಿ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದರು. ಈ ವೇಳೆ ರಾಮ್‌ಪಾಲ್ ಮತ್ತು ಗ್ಯಾಬ್ರಿಯೆಲಾ ಅವರಿಗೆ ಬುಧವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.

ADVERTISEMENT

ಆದರೆ ಅರ್ಜುನ್‌ ರಾಮ್‌‍ಪಾಲ್‌ ಅವರು ಗುರುವಾರ ಎನ್‌ಸಿಬಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚಿಗೆ ಬಾಲಿವುಡ್‌ ನಿರ್ಮಾಪಕ ಫಿರೋಜ್‌ ನಾಡಿಯಾಡ್ವಾಲಾ ಅವರ ನಿವಾಸದ ಮೇಲೆ ಎನ್‌ಸಿಬಿ ದಾಳಿ ನಡೆಸಿತ್ತು. ಈ ವೇಳೆ ಅವರ ನಿವಾಸದಲ್ಲಿ ಗಾಂಜಾ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಫಿರೋಜ್‌ ಪತ್ನಿ ಶಭಾನಾ ಸಯೀದ್‌ ಅವರನ್ನು ಬಂಧಿಸಲಾಗಿತ್ತು.ಇದರ ಬೆನ್ನಲ್ಲೇ ರಾಮ್‌ಪಾಲ್‌ ಅವರ ನಿವಾಸದ ಮೇಲೆ ಎನ್‌ಸಿಬಿ ದಾಳಿ ನಡೆಸಿದೆ.

ಕಳೆದ ತಿಂಗಳು ಗ್ಯಾಬ್ರಿಯೆಲಾ ಸಹೋದರ ಅಗಿಸಿಲಾಸ್ ಡಿಮೆಟ್ರಿಯೇಡ್ಸ್‌ನನ್ನು ಎನ್‌ಸಿಬಿ ಪೊಲೀಸರು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.