ನವದೆಹಲಿ: ನ್ಯಾಯಾಂಗದ ಉನ್ನತ ಹುದ್ದೆಗಳ ನೇಮಕಾತಿ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ, ರಾಜ್ಯಸಭೆ ಸದಸ್ಯ ಬಹರುಲ್ ಇಸ್ಲಾಂ ನೇಮಕ ಉಲ್ಲೇಖಿಸಿ ಟೀಕಿಸಿದ್ದಾರೆ.
ಈ ಆರೋಪಕ್ಕೆ ಕಾಂಗ್ರೆಸ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ‘ನ್ಯಾಯಾಂಗ ಪ್ರಕ್ರಿಯೆ, ಕೋರ್ಟ್, ನ್ಯಾಯಮೂರ್ತಿಗಳನ್ನು ಆರ್‌ಎಸ್‌ಎಸ್, ಜನಸಂಘ, ಬಿಜೆಪಿ ನಾಚಿಕೆಗೇಡಿನ ರಾಜಕಾರಣಕ್ಕೆ ಬಳಸಿಕೊಂಡಿರುವ ಇತಿಹಾಸವೇ ಇದೆ’ ಎಂದು ಹೇಳಿದೆ.
‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದ ದುಬೆ, ‘ಕಾಂಗ್ರೆಸ್ ಪಕ್ಷದ ಸಂವಿಧಾನ ಉಳಿಸಿ ಕುರಿತು ಆಸಕ್ತಿದಾಯಕ ಕಥೆ ಇದೆ. ಬಹರುಲ್ ಇಸ್ಲಾಂ ಸಾಹೀಬ್ ಅವರು ಅಸ್ಸಾಂನಲ್ಲಿ 1951ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದರು. ತುಷ್ಟೀಕರಣದ ಹೆಸರಿನಲ್ಲಿ ಕಾಂಗ್ರೆಸ್ ಅವರನ್ನು 1962 ರಾಜ್ಯಸಭೆ ಸದಸ್ಯರಾಗಿಸಿತು. ಮತ್ತೆ 1968ರಲ್ಲಿ ರಾಜ್ಯಸಭೆ ಸದಸ್ಯರಾದರು. ಆದರೆ, ರಾಜ್ಯಸಭೆ ಸದಸ್ಯತ್ವಕ್ಕೆ ಅವರಿಂದ ರಾಜೀನಾಮೆಯನ್ನು ಕೊಡಿಸದೇ 1972ರಲ್ಲಿ ಹೈಕೋರ್ಟ್ ಜಡ್ಜ್ ಆಗಿ ನೇಮಿಸಲಾಗಿತ್ತು’ ಎಂದು ಹೇಳಿದ್ದಾರೆ.
‘ಮುಂದೆ ಅವರು 1979ರಲ್ಲಿ ಅಸ್ಸಾಂ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾದರು. 1980ರಲ್ಲಿ ನಿವೃತ್ತರಾದರು. ಇದು, ಕಾಂಗ್ರೆಸ್. 1980ರಲ್ಲಿ ನಿವೃತ್ತರಾದ ನ್ಯಾಯಮೂರ್ತಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸಲಾಗುತ್ತದೆ. ಅವರು ಮುಂದೆ ಇಂದಿರಾಗಾಂಧಿ ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನು ಬದ್ಧತೆಯಿಂದ ಇತ್ಯರ್ಥಪಡಿಸುತ್ತಾರೆ. ಇದರಿಂದ ತೃಪ್ತರಾದ ಕಾಂಗ್ರೆಸ್ ಮತ್ತೆ 1983ರಲ್ಲಿ ಅವರನ್ನು ರಾಜ್ಯಸಭೆ ಸದಸ್ಯರಾಗಿ ನೇಮಿಸುತ್ತದೆ’ ಎಂದು ದುಬೆ ಉಲ್ಲೇಖಿಸುತ್ತಾರೆ.
ಈ ಹಿಂದೆ ಮಾಡಿದ್ದ ಪೋಸ್ಟ್‌ನಲ್ಲಿ ದುಬೆ ಅವರು, ‘1967–68ರಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಕೈಲಾಶ್ ನಾಥ್ ವಾಂಚೂ ಅವರು ಕಾನೂನು ಶಿಕ್ಷಣ ಪಡೆದಿರಲಿಲ್ಲ ಎಂಬುದು ನಿಮಗೆ ಗೊತ್ತೆ’ ಎಂದು ಪ್ರಶ್ನಿಸಿದ್ದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ, ದುಬೆ ಅವರಿಗೆ ಬಹುಶಃ ಗುಮನ್ ಮಲ್ ಲೋಧಾ ಅವರ ಹೆಸರು ಗೊತ್ತಿರಲಿಕ್ಕಿಲ್ಲ. ಗೊತ್ತಿದ್ದರೂ ಅವರು ಏನೂ ಹೇಳುವುದಿಲ್ಲ ಎಂದು ಟೀಕಿಸಿದ್ದಾರೆ.
‘ಲೋಧಾ ಅವರು 1969 ರಿಂದ 1971ರ ವರೆಗೆ ಜನಸಂಘ ರಾಜಸ್ಥಾನ ಘಟಕದ ಅಧ್ಯಕ್ಷರಾಗಿದ್ದರು. 1972ರಿಂದ 1977ರವರೆಗೆ ರಾಜಸ್ಥಾನ ಶಾಸನಸಭೆಯ ಸದಸ್ಯರಾಗಿದ್ದರು. ಮುಂದೆ ಜನತಾಪಾರ್ಟಿ ಸರ್ಕಾರದಲ್ಲಿ, ಜನಸಂಘದ ಕೃಪೆಯಿಂದಾಗಿ 1978ರಲ್ಲಿ ರಾಜಸ್ಥಾನ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದರು. ಇದು, ಇಲ್ಲಿಗೆ ಮುಗಿಯುವುದಿಲ್ಲ. ಲೋಧಾ ಅವರು ಮುಂದೆ 1988ರಲ್ಲಿ ಗುವಾಹಟಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾದರು’ ಎಂದು ಖೇರಾ ‘ಎಕ್ಸ್‘ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಸಿಜೆಐ ಅವರಿಂದ ರಾಜೀನಾಮೆ ಕೊಡಿಸಿ, ರಾಷ್ಟ್ರಪತಿ ಚುನಾವಣೆಗೆ ಕಣಕ್ಕಿಳಿಸಲಾಗುತ್ತದೆ. ‘ನ್ಯಾಯಮೂರ್ತಿಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಕ್ಕೆ ಇದು, ಅತಿದೊಡ್ಡ ನಾಚಿಗೇಡಿನ ಉದಾಹರಣೆ’ ಎಂದು ಖೇರಾ ಹೇಳಿದ್ದಾರೆ.
'ಕೆ.ಸುಬ್ಬರಾವ್ ಅವರು ಜೂನ್ 30,1966ರಲ್ಲ ಭಾರತದ 9ನೇ ಮುಖ್ಯ ನ್ಯಾಯಮೂರ್ತಿಯಾದರು. ಕೆಲ ತಿಂಗಳ ಬಳಿಕ ಜನಸಂಘದ ಒತ್ತಾಯದ ಮೇರೆಗೆ ಏಪ್ರಿಲ್ 11, 1967ರಲ್ಲಿ ರಾಜೀನಾಮೆ ನೀಡಿದರು. ಆದರೆ, 1967ರಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಝಾಕೀರ್ ಹಸೇನ್ ಅವರಿಂದ ಪರಾಭವಗೊಂಡರು’ ಎಂದು ಖೇರಾ ಸ್ಮರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.