ADVERTISEMENT

ನಾಯಕರ ಮಕ್ಕಳಿಗೆ ಟಿಕೆಟ್‌ ನೀಡದ್ದು ಉದ್ದೇಶಪೂರ್ವಕ: ನರೇಂದ್ರ ಮೋದಿ

ಪಿಟಿಐ
Published 15 ಮಾರ್ಚ್ 2022, 21:49 IST
Last Updated 15 ಮಾರ್ಚ್ 2022, 21:49 IST
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮಂಗಳವಾರ ಸನ್ಮಾನಿಸಲಾಯಿತು ಪಿಟಿಐ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮಂಗಳವಾರ ಸನ್ಮಾನಿಸಲಾಯಿತು ಪಿಟಿಐ ಚಿತ್ರ   

ನವದೆಹಲಿ: ವಂಶಾಡಳಿತವು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ. ಬಿಜೆಪಿ ವಂಶಾಡಳಿತದ ವಿರೋಧಿಯಾಗಿದೆ. ಹಾಗಾಗಿಯೇ, ಬಿಜೆಪಿ ಸಂಸದರ ಮಕ್ಕಳಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಉದ್ದೇಶಪೂರ್ವಕವಾಗಿಯೇ ಟಿಕೆಟ್‌ ನೀಡಲಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ಭಾರಿ ಗೆಲುವಿನ ಬಳಿಕ, ಮಂಗಳವಾರ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮೋದಿ ಅವರು ಮಾತನಾಡಿದರು. ಇತ್ತೀಚೆಗೆ ಚುನಾವಣೆ ನಡೆದ ಐದು ರಾಜ್ಯಗಳ ಸಂಸದರು ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿ ಅತಿ ಕಡಿಮೆ ಮತ ಪಡೆದ ಕನಿಷ್ಠ ನೂರು ಮತಗಟ್ಟೆಗಳನ್ನು ಗುರುತಿಸಬೇಕು. ಕಡಿಮೆ ಮತ ಪಡೆಯಲು ಕಾರಣಗಳೇನು ಎಂಬುದನ್ನು ಕಂಡು ಹಿಡಿಯಬೇಕು ಎಂದು ಅವರು ಕರೆ ಕೊಟ್ಟಿದ್ದಾರೆ.

ನಾಲ್ಕು ರಾಜ್ಯಗಳ ಚುನಾವಣಾ ಗೆಲುವಿಗಾಗಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಸನ್ಮಾನಿಸಲಾಯಿತು. ಬಜೆಟ್‌ ಅಧಿವೇಶನ ಆರಂಭವಾದ ಬಳಿಕ ಇದೇ ಮೊದಲಿಗೆ ಸಂಸದೀಯ ಪಕ್ಷದ ಸಭೆ ನಡೆದಿದೆ. ಸಭೆಯಲ್ಲಿ ನಡ್ಡಾ ಅವರೂ ಮಾತನಾಡಿದರು.

ADVERTISEMENT

‘ದೇಶದಲ್ಲಿ ಈಗ ವಂಶಾಡಳಿತ ವಿರೋಧಿ ವಾತಾವರಣ ಇದೆ. ಜನರ ಈ ಭಾವನೆಯನ್ನು ಬಿಜೆಪಿ ಗೌರವಿಸಿದೆ. ಹಾಗಾಗಿಯೇ ಪಕ್ಷದ ನಾಯಕರ ಕುಟುಂಬದ ಸದಸ್ಯರಿಗೆ ಟಿಕೆಟ್‌ ನೀಡದಿರಲು ನಿರ್ಧರಿಸಲಾಯಿತು. ಈ ನಿರ್ಧಾರವನ್ನು ಪಕ್ಷದ ನಾಯಕರು ಬೆಂಬಲಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಉಕ್ರೇನ್‌ನಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಸರ್ಕಾರವು ಪ್ರಯತ್ನಿಸುತ್ತಿದ್ದಾಗ, ಕೆಲವು ನಾಯಕರು ಅದನ್ನು ರಾಜಕೀಯಯಕ್ಕೆ ಬಳಸಿಕೊಳ್ಳಲು ಯತ್ನಿಸಿದರು. ಸರಿಯಾದ ಮತ್ತು ನಿಖರವಾದ ಮಾಹಿತಿ ಇಲ್ಲದೆ ಮಾತನಾಡಿದರು ಎಂದು ಮೋದಿ ಹೇಳಿದ್ದಾಗಿ ಜೋಶಿ ತಿಳಿಸಿದರು.

ಆಡಳಿತ ವಿರೋಧಿ ಅಲೆಯನ್ನು ಆಡಳಿತ ಪರ ಅಲೆಯನ್ನಾಗಿ ಪರಿವರ್ತಿಸುವ ಹೊಸ ಶೈಲಿಯ ರಾಜಕಾರಣವನ್ನು ಬಿಜೆಪಿ ಆರಂಭಿಸಿದೆ ಎಂದು ನಡ್ಡಾ ಹೇಳಿದ್ದಾರೆ ಎಂದು ಜೋಶಿ ಮಾಹಿತಿ ಅವರುನೀಡಿದರು.

*

ಅವರು ಅಡಗಿಸಿಡಲು ಪ್ರಯತ್ನಿಸಿದ್ದ ವಿಚಾರಗಳು ಈಗ ಸತ್ಯಾಂಶಗಳ ಆಧಾರದೊಂದಿಗೆ ಹೊರಗೆ ಬರುತ್ತಿವೆ. ಇದರಿಂದ ಅವರಿಗೆ ಆಘಾತವಾಗಿದೆ.
–ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.