ADVERTISEMENT

ಬಾದಾಮಿ ಗುಹಾಂತರ ದೇವಾಲಯಗಳ ವರ್ಣಚಿತ್ರಗಳಿಗೆ ಡಿಜಿಟಲ್‌ ಸ್ಪರ್ಶ

ಜಾಗತಿಕ ಪ್ರೇಕ್ಷಕರಿಗಾಗಿ ಪ್ರಾಚೀನ ಕಲೆಯ ಪ್ರದರ್ಶನ ಅನಾವರಣ

​ಪ್ರಜಾವಾಣಿ ವಾರ್ತೆ
Published 30 ಮೇ 2021, 11:22 IST
Last Updated 30 ಮೇ 2021, 11:22 IST
ಖ್ಯಾತ ಛಾಯಾಗ್ರಾಹಕ, ಇತಿಹಾಸಜ್ಞ ವಿನಯ್ ಕೆ.ಬೆಹ್ಲ್‌ ಅವರು ಚಿತ್ರ ತೆಗೆದು, ಡಿಜಿಟಲ್‌ ರೂಪದಲ್ಲಿ ಸಂಗ್ರಹಿಸಿರುವ ಬಾದಾಮಿ ಗುಹಾಂತರ ದೇವಾಲಯದಲ್ಲಿನ ವರ್ಣಚಿತ್ರ
ಖ್ಯಾತ ಛಾಯಾಗ್ರಾಹಕ, ಇತಿಹಾಸಜ್ಞ ವಿನಯ್ ಕೆ.ಬೆಹ್ಲ್‌ ಅವರು ಚಿತ್ರ ತೆಗೆದು, ಡಿಜಿಟಲ್‌ ರೂಪದಲ್ಲಿ ಸಂಗ್ರಹಿಸಿರುವ ಬಾದಾಮಿ ಗುಹಾಂತರ ದೇವಾಲಯದಲ್ಲಿನ ವರ್ಣಚಿತ್ರ   

ಮುಂಬೈ: ಕರ್ನಾಟಕದ ಬಾದಾಮಿಯಲ್ಲಿರುವ ಗುಹಾಂತರ ದೇವಾಲಯಗಳಲ್ಲಿರುವ ವರ್ಣಚಿತ್ರಗಳ ಛಾಯಾಚಿತ್ರಗಳನ್ನು ಸೆರೆಹಿಡಿದು, ಅವುಗಳನ್ನು ಡಿಜಿಟಲ್‌ ರೂಪದಲ್ಲಿ ಸಂಗ್ರಹಿಸಿಡಲಾಗಿದೆ.

ಈಗ ಲಭ್ಯವಿರುವ ಪ್ರಾಚೀನ ವರ್ಣಚಿತ್ರಗಳಿವು ಎಂಬ ಹೆಗ್ಗಳಿಕೆ ಇವುಗಳದ್ದು. ಈ ವರ್ಣಚಿತ್ರಗಳ ಛಾಯಾಚಿತ್ರಗಳ ಪ್ರದರ್ಶನವನ್ನು ಜಾಗತಿಕ ಪ್ರೇಕ್ಷಕರಿಗಾಗಿ ಇತ್ತೀಚೆಗೆ ಇಲ್ಲಿ ಅನಾವರಣಗೊಳಿಸಲಾಯಿತು.

ಪಾರಂಪರಿಕ ಕಲೆಯನ್ನು ಪುನರುಜ್ಜೀವನಗೊಳಿಸುವ ಕಾರ್ಯಕ್ಕೆ ಸಂಬಂಧಿಸಿ ಸರ್ಕಾರಕ್ಕೆ ಸಲಹೆ ನೀಡುವ ಸಂಸ್ಥೆಯಾದ ಸ್ಯಾಪಿಯೊ ಅನಾಲಿಟಿಕ್ಸ್‌ನ ‘ಸ್ಯಾಪಿಯೊ ಹೆರಿಟೇಜ್‌ ರಿಸ್ಟೋರೇಷನ್‌’ ವಿಭಾಗವು ಈ ಚಿತ್ರಗಳ ಪ್ರದರ್ಶನವನ್ನು ವರ್ಚುವಲ್‌ ಮೂಲಕ ಆಯೋಜಿಸಿತ್ತು.

ADVERTISEMENT

‘ಎ ಲಾಸ್ಟ್‌ ಟ್ರೆಡಿಷನ್‌ ಆಫ್‌ ಆರ್ಟ್‌ ಆ್ಯಂಡ್ ಅರ್ಲಿಯೆಸ್ಟ್‌ ಸರ್ವೈವಿಂಗ್‌ ಪೇಂಟಿಂಗ್‌ ಇನ್ ಹಿಂದೂ ಟೆಂಪಲ್‌’ ಹೆಸರಿನ ಪ್ರದರ್ಶನಕ್ಕೆ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್‌) ಅಧ್ಯಕ್ಷ ಡಾ.ವಿನಯ್ ಸಹಸ್ರಬುದ್ಧೆ ಹಾಗೂ ಜಿ7 ರಾಷ್ಟ್ರಗಳಿಗೆ ಭಾರತದ ಪ್ರತಿನಿಧಿ ಸುರೇಶ್‌ ಪ್ರಭು ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.

ಕಲಾ ಇತಿಹಾಸಜ್ಞ, ಛಾಯಾಗ್ರಾಹಕ ಹಾಗೂ ಚಿತ್ರನಿರ್ಮಾಪಕ ವಿನಯ್‌ ಕೆ.ಬೆಹ್ಲ್‌ ಅವರು ಈ ವರ್ಣಚಿತ್ರಗಳ ಛಾಯಾಚಿತ್ರಗಳನ್ನು ಸೆರೆಹಿಡಿದು, ಡಿಜಿಟಲ್‌ ರೂಪದಲ್ಲಿ ಸಂಗ್ರಹಿಸಿದ್ದಾರೆ.

ಇವು ಬಾದಾಮಿಯ ಮೂರನೇ ಗುಹೆಯಲ್ಲಿರುವ ವರ್ಣಚಿತ್ರಗಳು. 2001ರಲ್ಲಿ ಕ್ಯಾಮೆರಾದಲ್ಲಿ ಸೆರೆ ಹಿಡಿದ ಇವುಗಳ ಚಿತ್ರಗಳನ್ನು ನಂತರ ಡಿಜಿಟಲ್‌ ತಂತ್ತಜ್ಞಾನದ ಮೂಲಕ ಸಂಗ್ರಹಿಸಿಡಲಾಗಿದೆ. ಪ್ರಾಚೀನ ಕಲೆಯ ಚಿತ್ರಗಳನ್ನು ಸೆರೆ ಹಿಡಿಯುವ ಸಲುವಾಗಿಯೇ ಅಭಿವೃದ್ಧಿಪಡಿಸಿರುವ ‘ಲೊ ಲೈಟ್‌ ಫೋಟೊಗ್ರಾಫಿ’ ತಂತ್ರಜ್ಞಾನ ಬಳಸಿ ಚಿತ್ರಗಳನ್ನು ತೆಗೆಯಲಾಗಿದೆ.

‘ಇದು 6ನೇ ಶತಮಾನದ ಮ್ಯೂರಲ್‌. ‘ಕ್ವೀನ್ ಆ್ಯಂಡ್‌ ಹರ್ ಅಟೆಂಡನ್ಸ್‌’ ಎಂಬ ಹೆಸರಿನಲ್ಲಿ ವರ್ಣಚಿತ್ರಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಹಿಂದೂ ದೇವಾಲಯಗಳಲ್ಲಿ ನಮಗೆ ಈಗ ಲಭ್ಯ ಇರುವ ಪ್ರಾಚೀನ ವರ್ಣಚಿತ್ರಗಳಿವು’ ಎಂದು ಬೆಹ್ಲ್‌ ಹೇಳಿದರು.

‘ತಾಂತ್ರಿಕವಾಗಿ ಈ ಮ್ಯೂರಲ್‌ಗಳು ಗಮನ ಸೆಳೆಯುವ ಜೊತೆಗೆ, ಪ್ರಾಚೀನ ಕಲಾವಿದರು ಜೀವನ ಕುರಿತು ತಾವು ಹೊಂದಿದ್ದ ಮುನ್ನೋಟವನ್ನು ಈ ಮ್ಯೂರಲ್‌ಗಳ ಮೂಲಕ ವ್ಯಕ್ತಪಡಿಸಿರುವುದು ಗಮನ ಸೆಳೆಯುತ್ತದೆ’ ಎಂದರು.

‘ಅಗಾಧ ತತ್ವಜ್ಞಾನ, ಸಹಾನುಭೂತಿಯನ್ನು ಈ ವರ್ಣಚಿತ್ರಗಳ ಮೂಲಕ ವ್ಯಕ್ತಪಡಿಸಲಾಗಿದೆ. ಈ ಕಾರಣಕ್ಕಾಗಿಯೇ ಭಾರತದ ವರ್ಣಚಿತ್ರಗಳು ಮನುಕುಲದ ಕಲಾಭಿವ್ಯಕ್ತಿಯಲ್ಲಿ ಅತ್ಯುತ್ತಮ ಎನಿಸುತ್ತವೆ’ ಎಂದೂ ಅವರು ಹೇಳಿದರು.

‘ಈ ವರ್ಣಚಿತ್ರಗಳು 6ನೇ ಶತಮಾನಕ್ಕೆ ಸೇರಿದವುಗಳಾಗಿವೆ ಎಂಬುದು ವೈಜ್ಞಾನಿಕ ಪರೀಕ್ಷೆಗಳಿಂದ ಸಾಬೀತಾಗಿದೆ. ಹೀಗಾಗಿ ಈಗ ಲಭ್ಯರುವ ಅತಿ ಪ್ರಾಚೀನ ಮ್ಯೂರಲ್‌ಗಳಿವು ಎಂಬುದರಲ್ಲಿ ಸಂಶಯವಿಲ್ಲ’ ಎಂದು ಸ್ಯಾಪಿಯೊ ಅನಾಲಿಟಿಕ್ಸ್‌ನ ಸಿಇಒ ಅಶ್ವಿನ್‌ ಶ್ರೀವಾಸ್ತವ ’ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.