ADVERTISEMENT

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ; ಇಂದು ಚುನಾವಣಾ ಆಯೋಗ ಪ್ರಕಟಣೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2018, 8:39 IST
Last Updated 6 ಅಕ್ಟೋಬರ್ 2018, 8:39 IST
   

ನವದೆಹಲಿ: ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ ಶನಿವಾರ ಪ್ರಕಟಿಸಲಿದೆ.

ಮಧ್ಯ ಪ್ರದೇಶ, ರಾಜಸ್ಥಾನ, ಚತ್ತೀಸ್‌ಗಢ ಮಿಜೋರಾಂ ಹಾಗೂ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣಾ ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆ ರಾಜಕೀಯ ಪಕ್ಷಗಳು ಅನುಸರಿಸಬೇಕಾದ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ.

ಸೆಪ್ಟೆಂಬರ್‌ನಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ವಿಧಾನಸಭೆ ವಿಸರ್ಜಿಸುವ ಮೂಲಕ ಅವಧಿಗೂ ಮುನ್ನವೇ ಟಿಎಸ್‌ಆರ್‌ ಚುನಾವಣೆಗೆ ಸಿದ್ಧವಿರುವುದಾಗಿ ಘೋಷಿಸಿದ್ದರು. ತೆಲಂಗಾಣದಲ್ಲಿ ಕಾಂಗ್ರೆಸ್‌ ಮತ್ತು ಟಿಡಿಪಿ ಈಗಾಗಲೇ ಮೈತ್ರಿ ಪ್ರಕಟಿಸಿದೆ. ವಿಧಾನಸಭಾ ಚುನಾವಣೆ ಮುಂಬರುವ ಲೋಕಸಭಾ ಚುನಾವಣೆಯ ಮೇಲೂ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ.

ADVERTISEMENT

ಚತ್ತೀಸ್‌ಗಢದಲ್ಲಿ ಅಜಿತ್‌ ಜೋಗಿ ಅವರ ಜನತಾ ಕಾಂಗ್ರೆಸ್‌ನೊಂದಿಗೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಮೈತ್ರಿ ಮಾಡಿಕೊಳ್ಳುವುದಾಗಿ ಇತ್ತೀಚೆಗೆ ಪ್ರಕಟಿಸಿದ್ದಾರೆ. ಸೀಟು ಹಂಚಿಕೆ ಸಂಬಂಧ ಮಾಯಾವತಿ ಕಾಂಗ್ರೆಸ್‌ನೊಂದಿಗೆ ನಡೆಸಿದ್ದ ಮಾತುಕತೆ ವಿಫಲಗೊಂಡಿತ್ತು. ಮಧ್ಯಪ್ರದೇಶದಲ್ಲಿಯೂ ಕಾಂಗ್ರೆಸ್‌ನೊಂದಿಗೆ ನಡೆಸಿದ ಮಾತುಕತೆ ಫಲ ನೀಡಿಲ್ಲ, ಅಲ್ಲಿ ಬಿಎಸ್‌ಪಿಯ 22 ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತಯಾರಿ ನಡೆಸಿದ್ದಾರೆ.

ಮಿಜೋರಾಂ ಹೊರತು ಪಡಿಸಿ ಉಳಿದ ಮೂರು ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ.

ರಾಜಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಅವರ ಸಾರ್ವಜನಿಕ ಸಭೆ ಶನಿವಾರ ಆಯೋಜನೆಯಾಗಿದೆ. ಚುನಾವಣಾ ಆಯೋಗ ಮಧ್ಯಾಹ್ನ 3 ಗಂಟೆ ವೇಳೆ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟಿಸುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.