ADVERTISEMENT

ವೋಟಿಗಾಗಿ ನೋಟು ತಡೆಯಲು ಚುನಾವಣಾ ಆಯೋಗಕ್ಕೆ ಅಧಿಕಾರ ನೀಡಲಿಲ್ಲ ಮೋದಿ ಸರ್ಕಾರ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 5:40 IST
Last Updated 2 ಏಪ್ರಿಲ್ 2019, 5:40 IST
   

ನವದೆಹಲಿ: ಮತದಾರರು ವೋಟಿಗಾಗಿ ನೋಟು ಪಡೆದಿರುವುದು ಖಚಿತವಾದರೆ ಅದನ್ನು ಆಧಾರವಾಗಿಟ್ಟುಕೊಂಡ ಚುನಾವಣೆಯನ್ನು ರದ್ದು ಮಾಡಲು ತನಗೆ ಹೆಚ್ಚಿನ ಅಧಿಕಾರ ನೀಡುವಂತೆ ಚುನಾವಣಾ ಆಯೋಗ ನಾಲ್ಕು ಬಾರಿ ಸಲ್ಲಿಸಿದ್ದ ಮನವಿಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರತಿ ಬಾರಿಯೂ ತಿರಸ್ಕರಿಸಿದೆ.

2016ರಿಂದ ನಾಲ್ಕು ಬಾರಿ ಆಯೋಗ ಈ ಕುರಿತು ಕಾನೂನು ಇಲಾಖೆಗೆ ಪತ್ರ ಬರೆದಿದೆ. 2016ರ ಜೂನ್‌ 6ರಂದುಮೊದಲ ಬಾರಿಗೆ ಆಗಿನ ಮುಖ್ಯ ಚುನಾವಣಾ ಆಯುಕ್ತನಾಸಿಂ ಜೈದಿ ಪತ್ರ ಬರೆದಿದ್ದರು ಎಂಬ ಆರ್‌ಟಿಐ ದಾಖಲೆಗಳ ಆಧಾರ ಮೇಲೆ ದಿ ವೈರ್‌ ವರದಿ ಮಾಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೋಟು ರದ್ಧತಿ ಘೋಷಿಸುವ ಎರಡು ತಿಂಗಳ ಮುನ್ನಾ ಈ ಬೆಳವಣಿಗೆ ನಡೆದಿದೆ.

ADVERTISEMENT

ಪ್ರಭಾವಿಗಳು ಮತಗಟ್ಟೆಯನ್ನು ವಶಕ್ಕೆ ತೆಗೆದುಕೊಂಡು ಅಕ್ರಮ ಎಸಗುವ ಕೃತ್ಯಗಳ ಆಧಾರದ ಮೇಲೆ ಆ ಚುನಾವಣೆಯನ್ನು ಮುಂದೂಡುವ ಅಥವಾ ರದ್ದು ಮಾಡುವ ಅಧಿಕಾರವಿರುವ 1951ರ ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್‌ ‘58 ಎ’ಗೆ ತಿದ್ದುಪಡಿ ಬಯಸಿ ಚುನಾವಣಾ ಆಯೋಗ ಕಾನೂನು ಇಲಾಖೆಗೆ ಈ ಮನವಿ ಸಲ್ಲಿಸಿತ್ತು.

ಇದೇ ಸೆಕ್ಷನ್‌ನ ಮಾದರಿಯಲ್ಲಿ ಸೆಕ್ಷನ್‌ ‘58 ಬಿ’ ರಚಿಸಲು ಚುನಾವಣಾ ಆಯೋಗ ಸಿದ್ಧತೆ ನಡೆಸಿತ್ತು. ಮತದಾರರು ರಾಜಕೀಯ ಪಕ್ಷಗಳಿಂದ ಹಣ ಪಡೆದು ಮತ ಚಲಾಯಿಸಿದನ್ನು ಆಧಾರವಾಗಿಟ್ಟುಕೊಂಡು ಈ ಹೊಸ ಸೆಕ್ಷನ್‌ ಮೂಲಕ ಚುನಾವಣೆ ರದ್ದು ಮಾಡುವ ಅಧಿಕಾರವನ್ನು ಆಯೋಗ ಕೇಳಿತ್ತು.

ಆದರೆ, ಮತಗಟ್ಟೆ ವಶಕ್ಕೆ ಪಡೆಯುವುದು ಹಾಗೂ ಮತದಾರ ಹಣ ಪಡೆದು ಮತ ಚಲಾಯಿಸುವುದು ಬೇರೆ ಬೇರೆ. ಇವೆರಡನ್ನೂ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಹೇಳಿದ ಕಾನೂನು ಇಲಾಖೆ ಚುನಾವಣಾ ಆಯೋಗದ ಪ್ರಸ್ತಾವವನ್ನು ತಿರಸ್ಕರಿಸಿದೆ.

ಕಾನೂನು ಇಲಾಖೆ ಹಾಗೂ ಸಚಿವ ರವಿಶಂಕರ್‌ ಪ್ರಸಾದ್‌ ಆಯೋಗದ ಈ ಪ್ರಸ್ತಾವವನ್ನು ತಿರಸ್ಕರಿಸಿ,‘ಚುನಾವಣಾ ಅಕ್ರಮಗಳು ನಡೆದಾಗ ಕಠಿಣ ಕ್ರಮ ಕೈಗೊಳ್ಳಲು ಸಂವಿಧಾನದ 324ನೇ ಕಲಂ ಅಡಿ ಚುನಾವಣಾ ಆಯೋಗಕ್ಕೆ ಅಧಿಕಾರವಿದೆ. ಹೀಗಾಗಿ ಹೊಸ ಕಾಯ್ದೆಯ ಅಗತ್ಯವಿಲ್ಲ’ ಎಂದು ಹೇಳಿತ್ತು.

2016ರ ಸೆಪ್ಟೆಂಬರ್‌ 26ರಲ್ಲಿ ಆಯೋಗ ಮತ್ತೊಮ್ಮೆ ಪತ್ರ ಬರೆದಾಗ ಕೇಂದ್ರ ಸರ್ಕಾರದ ಉಪಕಾರ್ಯದರ್ಶಿ ಕೆ.ಕೆ.ಸಕ್ಸೇನಾ ಅವರೂ ಇದೇ ರೀತಿಯ ಉತ್ತರ ನೀಡಿ ಆಯೋಗಕ್ಕೆ ಪತ್ರ ರವಾನಿಸಿತ್ತು. 2017ರ ಮೇ 22ರಂದು ಕೇಂದ್ರ ಸರ್ಕಾರ, ಆಯೋಗಕ್ಕೆ ಬರೆದ ಪತ್ರದಲ್ಲಿಯೂ ಇದನ್ನೇ ಪುನರುಚ್ಛರಿಸಿತ್ತು.

ಈ ಕುರಿತು ಮಾತನಾಡಿರುವ ಜೈದಿ, ’ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸಲು ಸೆಕ್ಷನ್‌ ‘58 ಬಿ’ ರಚಿಸುವ ಅಗತ್ಯ ಹೆಚ್ಚಿದೆ. ಹಾಗಾಗಿ ಆಯೋಗ ಪದೇ ಪದೇ ಈ ಕುರಿತ ಪ್ರಸ್ತಾವನ್ನು ಸರ್ಕಾರಕ್ಕೆ ಸಲ್ಲಿಸುತ್ತಿರಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಸುನೀಲ್‌ ಅರೋರಾ, ‘ಚುನಾವಣೆಯಲ್ಲಿ ಹಣ ಸಾಕಷ್ಟು ದುರ್ಬಳಕೆಯಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಪ್ರಮುಖ ಸವಾಲಾಗಿದೆ. ಈ ಹಿಂದಿನ ಆಯುಕ್ತರೂ ಈ ಸಮಸ್ಯೆಯ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದಾರೆ’ ಎಂದು ತಿಳಿಸಿದ್ದಾರೆ.

ಹಣ, ಡ್ರಗ್ಸ್‌, ಮದ್ಯ ವಶ

2016ರಲ್ಲಿ ನಡೆದ ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಪುದುಚೆರಿ ವಿಧಾನಸಭಾ ಚುನಾವಣೆ ವೇಳೆ ಆಯೋಗ ಒಟ್ಟು ₹175.53 ಕೋಟಿ ಹಣವನ್ನು ವಶಪಡಿಸಿಕೊಂಡಿತ್ತು. ಜೊತೆಗೆ ₹24.29 ಕೋಟಿ ಮೌಲ್ಯದ 52.76 ಲೀಟರ್ ಮದ್ಯ ಹಾಗೂ ₹12.05 ಕೋಟಿ ಮೌಲ್ಯದ 65,260 ಕೆ.ಜಿ ಗಾಂಜಾ ವಶಕ್ಕೆ ಪಡೆದಿತ್ತು.

ನೋಟು ರದ್ಧತಿಯಿಂದಾಗಿ ಕಪ್ಪು ಹಣ ಚಲಾವಣೆ ಕಡಿಮೆುಯಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ, ಅದು ಯಾವುದೇ ಪರಿಣಾಮ ಬೀರಿಲ್ಲ. 2018ರಲ್ಲಿ 5 ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ಆಯೋಗ ₹200 ಕೋಟಿ ವಶಪಡಿಸಿಕೊಂಡಿದೆ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್‌ ತಿಳಿಸಿದ್ದಾರೆ.

ಅಭ್ಯರ್ಥಿಗಳು ಮತದಾರರಿಗೆ ಹಣ ಹಂಚಿರುವುದು ಖಚಿತವಾಗಿದ್ದರಿಂದ ಚುನಾವಣಾ ಆಯೋಗವು 2016ರ ಮೇ ತಿಂಗಳಲ್ಲಿ ನಡೆಯಬೇಕಿದ್ದ ತಮಿಳುನಾಡಿನ ಅರವ್‌ಕುರಿಚಿ ಮತ್ತು ತಂಜಾವೂರು ಕ್ಷೇತ್ರಗಳ ಚುನಾವಣೆಯನ್ನು ರದ್ದುಗೊಳಿಸಿತ್ತು. ಸಂವಿಧಾನದ 324ನೇ ಕಲಂ ಅಡಿ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.