ADVERTISEMENT

ಚುನಾವಣಾ ಬಾಂಡ್‌: ಆಯೋಗದಿಂದ ಮಾಹಿತಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 16:23 IST
Last Updated 14 ಮಾರ್ಚ್ 2024, 16:23 IST
.
.   

ನವದೆಹಲಿ: ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಸಲ್ಲಿಸಿರುವ ದತ್ತಾಂಶಗಳನ್ನು ಚುನಾವಣಾ ಆಯೋಗ ಗುರುವಾರ ಸಾರ್ವಜನಿಕಗೊಳಿಸಿದೆ.

ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ಎಸ್‌ಬಿಐ ಮಾರ್ಚ್‌ 12ರಂದು ಚುನಾವಣಾ ಆಯೋಗಕ್ಕೆ ಮಾಹಿತಿಯನ್ನು ಹಂಚಿಕೊಂಡಿತ್ತು. ಮಾರ್ಚ್‌ 15ರ ಸಂಜೆ 5 ಗಂಟೆಯೊಳಗೆ ತನ್ನ ವೆಬ್‌ಸೈಟ್‌ನಲ್ಲಿ ದತ್ತಾಂಶವನ್ನು ಅಪ್‌ಲೋಡ್‌ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಚುನಾವಣಾ ಆಯೋಗಕ್ಕೂ ಸೂಚಿಸಿತ್ತು.

ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಎಸ್‌ಬಿಐ ಎರಡು ಭಾಗಗಳಲ್ಲಿ ಆಯೋಗಕ್ಕೆ ಸಲ್ಲಿಸಿದೆ.

ADVERTISEMENT

ಚುನಾವಣಾ ಆಯೋಗ ಅಪ್‌ಲೋಡ್ ಮಾಡಿರುವ ಮಾಹಿತಿ ಪ್ರಕಾರ, ಚುನಾವಣಾ ಬಾಂಡ್‌ಗಳ ಖರೀದಿದಾರರಲ್ಲಿ ಗ್ರಾಸಿಂಗ್‌ ಇಂಡಸ್ಟ್ರೀಸ್‌, ಮೇಘಾ ಎಂಜಿನಿಯರಿಂಗ್‌, ಪೀರಾಮಲ್‌ ಎಂಟರ್‌ಪ್ರೈಸಸ್‌, ಟೊರೆಂಟ್ ಪವರ್, ಭಾರ್ತಿ ಏರ್‌ಟೆಲ್‌, ಡಿಎಲ್‌ಎಫ್‌ ಕಮರ್ಷಿಯಲ್‌ ಡೆವಲಪರ್ಸ್‌, ವೇದಾಂತ ಲಿಮಿಟೆಡ್‌, ಅಪೊಲೊ ಟೈರ್ಸ್‌, ಲಕ್ಷ್ಮಿ ಮಿತ್ತಲ್‌, ಎಡೆಲ್‌ವೀಸ್‌, ಕವೆಂಟರ್‌, ಸುಲಾ ವೈನ್‌, ವೆಲ್ಸ್‌ಪನ್‌ ಮತ್ತು ಸನ್‌ ಫಾರ್ಮ ಸೇರಿವೆ. 

ಚುನಾವಣಾ ಬಾಂಡ್‌ಗಳನ್ನು ನಗದೀಕರಿಸಿಕೊಂಡಿರುವ ಪಕ್ಷಗಳಲ್ಲಿ ಬಿಜೆಪಿ, ಕಾಂಗ್ರೆಸ್‌, ಎಐಎಡಿಎಂಕೆ, ಬಿಆರ್‌ಎಸ್‌, ಶಿವಸೇನಾ, ಟಿಡಿಪಿ, ವೈಎಸ್‌ಆರ್‌ ಕಾಂಗ್ರೆಸ್‌, ಡಿಎಂಕೆ, ಜೆಡಿಎಸ್, ಎನ್‌ಸಿಪಿ, ತೃಣಮೂಲ ಕಾಂಗ್ರೆಸ್‌, ಜೆಡಿಯು, ಆರ್‌ಜೆಡಿ, ಎಎಪಿ ಮತ್ತು ಸಮಾಜವಾದಿ ಪಕ್ಷಗಳು ಸೇರಿವೆ.

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಬಳಸುವ ಚುನಾವಣಾ ಬಾಂಡ್‌ಗಳು ಅಸಾಂವಿಧಾನಿಕ ಎಂದು ಫೆಬ್ರುವರಿ 15ರಂದು ಘೋಷಿಸಿದ್ದ ಸುಪ್ರಿಂ ಕೋರ್ಟ್‌, ಇವುಗಳನ್ನು ರದ್ದುಪಡಿಸಿ ತೀರ್ಪು ನೀಡಿತ್ತು. ಅಲ್ಲದೆ ದಾನಿಗಳು ಮತ್ತು ದೇಣಿಗೆ ಪಡೆದವರನ್ನು ಬಹಿರಂಗಪಡಿಸುವಂತೆ ನಿರ್ದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.