ADVERTISEMENT

ಮತ ಕಳ್ಳತನ ಆರೋಪ: ನಾಳೆ ಚುನಾವಣಾ ಆಯೋಗದ ಸುದ್ದಿಗೋಷ್ಠಿ

ಪಿಟಿಐ
Published 16 ಆಗಸ್ಟ್ 2025, 15:36 IST
Last Updated 16 ಆಗಸ್ಟ್ 2025, 15:36 IST
   

ನವದೆಹಲಿ: ‘ಮತ ಕಳ್ಳತನ’ದ ವಿಚಾರವಾಗಿ ದೇಶದಾದ್ಯಂತ ಪ್ರತಿಭಟನೆಯನ್ನು ತೀವ್ರಗೊಳಿಸಲು ಕಾಂಗ್ರೆಸ್‌ ಒಳಗೊಂಡ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ತೀರ್ಮಾನಿಸಿದ ಬೆನ್ನಲ್ಲೇ, ಚುನಾವಣಾ ಆಯೋಗವು ಭಾನುವಾರ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಲು ಮುಂದಾಗಿದೆ. 

ಚುನಾವಣಾ ವೇಳಾಪಟ್ಟಿ ಪ್ರಕಟಗೊಳ್ಳುವ ಮುನ್ನವೇ ಚುನಾವಣಾ ಆಯೋಗವು ಸುದ್ದಿಗೋಷ್ಠಿ ನಡೆಸಿ, ಸ್ಪಷ್ಟನೆ ನೀಡುವುದು ರೂಢಿಯಲ್ಲಿ ಇಲ್ಲದ ಕ್ರಮವಾಗಿದೆ. ಸುದ್ದಿಗೋಷ್ಠಿಯ ವಿಷಯ ಯಾವುದು ಎನ್ನುವುದನ್ನು ಆಯೋಗ ಸ್ಪಷ್ಟಪಡಿಸಿಲ್ಲ. ಆದರೆ, ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್‌) ಸಂಬಂಧಿಸಿದಂತೆ ಆಯೋಗದ ವಿರುದ್ಧ ಕಾಂಗ್ರೆಸ್‌‌ ನೇತೃತ್ವದ ಇಂಡಿಯಾ ಮೈತ್ರಿಕೂಟವು ಮಾಡಿರುವ ಸರಣಿ ಆರೋಪಗಳಿಗೆ ಸ್ಪಷ್ಟನೆ ನೀಡುವುದು ಸುದ್ದಿಗೋಷ್ಠಿಯ ವಿಷಯವಾಗಿರಬಹದು ಎಂದು ಅಧಿಕಾರಿಗಳು ಹೇಳಿದ್ದಾರೆ. 

‘ಮಹಾರಾಷ್ಟ್ರ, ಕರ್ನಾಟಕ ಮತ್ತು ಹರಿಯಾಣದಲ್ಲಿ ಭಾರಿ ‘ಮತ ಕಳ್ಳತನ’ ನಡೆಸಿ ಬಿಜೆಪಿ ಜಯ ಗಳಿಸಿದೆ. ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗಲು ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಕೈಜೋಡಿಸಿದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. 

ADVERTISEMENT

ಮತದಾರರ ಪಟ್ಟಿಯಲ್ಲಿ ಅಳಿಸಿ ಹಾಕಲಾಗಿದೆ ಎನ್ನಲಾದ ಮತದಾರರ ವಿವರವನ್ನು ಲಿಖಿತ ಘೋಷಣೆಯೊಂದಿಗೆ ಸಲ್ಲಿಸುವಂತೆ ಆಯೋಗವು ರಾಹುಲ್‌ಗೆ ಸೂಚಿಸಿತ್ತು. ಆಯೋಗದ ವಿರುದ್ಧ ತಮ್ಮ ಆರೋಪಗಳನ್ನು ವಾಪಸ್‌ ಪಡೆಯದಿದ್ದಲ್ಲಿ, ಸದನದಲ್ಲಿ ಕ್ಷಮೆ ಯಾಚಿಸುವಂತೆಯೂ ಎಚ್ಚರಿಕೆ ನೀಡಿತ್ತು. ಆದರೆ, ಆಯೋಗದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದ ರಾಹುಲ್‌, ‘ಚುನಾವಣಾ ಆಯೋಗದ ಮುಂದಿಟ್ಟಿರುವ ನಮ್ಮ ಬೇಡಿಕೆ ಸ್ಪಷ್ಟವಾಗಿದೆ. ಪಾರದರ್ಶಕತೆಯನ್ನು ತೋರಿಸಿ ಮತ್ತು ಡಿಜಿಟಲ್ ಸ್ವರೂಪದಲ್ಲಿ ಮತದಾರರ ಪಟ್ಟಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿ’ ಎಂದು ಆಗ್ರಹಿಸಿದ್ದರು. 

ಈ ನಡುವೆ  ಬಿಹಾರದಲ್ಲಿ ‘ಎಸ್‌ಐಆರ್‌‘ ವೇಳೆ ಪಟ್ಟಿಯಿಂದ ಕೈಬಿಟ್ಟಿರುವ 65 ಲಕ್ಷ ಮತದಾರರ ಹೆಸರು ಮತ್ತು ವಿವರಗಳನ್ನು ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶನ ನೀಡಿತ್ತು.

ಮತದಾರನ ಅಧಿಕಾರ ಯಾತ್ರೆಗೆ ನಾಳೆ ಚಾಲನೆ

ಸಸಾರಾಮ್‌(ಬಿಹಾರ): ‘ಒಬ್ಬರಿಗೆ ಒಂದು ಮತ’ ಹಕ್ಕು ಪ್ರತಿಪಾದನೆಯೊಂದಿಗೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಭಾನುವಾರ ಇಲ್ಲಿ ‘ಮತದಾರನ ಅಧಿಕಾರ (ಮತದಾರರ ಹಕ್ಕು) ಯಾತ್ರೆ’ಗೆ ಚಾಲನೆ ನೀಡಲಿದ್ದಾರೆ. 

ಯಾತ್ರೆಯು ಬಿಹಾರದಾದ್ಯಂತ 16 ದಿನಗಳು ನಡೆಯಲಿದೆ. 1300 ಕಿ.ಮೀ ಮಾರ್ಗದ ಈ ಯಾತ್ರೆಯು ಸೆಪ್ಟೆಂಬರ್‌ 1ರಂದು ಪಾಟ್ನಾದಲ್ಲಿ ಸಮಾರೋಪಗೊಳ್ಳಲಿದೆ.  ‘ರಾಹುಲ್‌ ಗಾಂಧಿ ಅವರು ಬಿಹಾರದಲ್ಲಿ ಕೈಗೊಂಡಿರುವ ಯಾತ್ರೆಯು ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ’ ಎಂದು ಕಾಂಗ್ರೆಸ್‌ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

‘ದೇಶದ ಚುನಾವಣಾ ಆಯೋಗವು ಈಗಿನ ಸ್ವಯಂ ಘೋಷಿತ ಡಬಲ್ ಎಂಜಿನ್‌ ಸರ್ಕಾರದ ಬೋಗಿ ಆಗುವುದನ್ನು ನಾವು ಒಪ್ಪುವುದಿಲ್ಲ. ಬಿಹಾರದ ಜನರ ಮತದಾನದ ಹಕ್ಕನ್ನು ಕಸಿದುಕೊಂಡ ಆಯೋಗದ ವಿರುದ್ಧ ನಾವು ಹೋರಾಟ ಮುಂದುವರಿಸುತ್ತೇವೆ’ ಎಂದು ಅವರು ಹೇಳಿದ್ದಾರೆ. 

ಮತ ಕಳ್ಳತನ ನಿಲ್ಲಿಸಿ ಅಭಿಯಾನ 

ಭಾರತೀಯ ಯುವ ಕಾಂಗ್ರೆಸ್‌ (ಐವೈಸಿ)  ‘ಮತ ಕಳ್ಳತನ ನಿಲ್ಲಿಸಿ’ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿದೆ.  ಅಭಿಯಾನವು ದೇಶದಾದ್ಯಂತ ನಡೆಯಲಿದೆ.  ಐವೈಸಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಉದಯ್‌ ಭಾನು ಛಿಬ್‌ ಅವರು ಜಮ್ಮು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದರು.

‘ಐವೈಸಿ ಕಾರ್ಯಕರ್ತರು ಬೂತ್‌ ಮಟ್ಟದಲ್ಲಿ ಮನೆ ಮನೆಗೆ ಭೇಟಿ ನೀಡಿ ಮತ ಕಳ್ಳತನದ ವಿರುದ್ಧ ಜಾಗೃತಿ ಮೂಡಿಸಲಿದ್ದಾರೆ. ಮತದಾರರ ಪಟ್ಟಿಯನ್ನು ಪರಿಶೀಲಿಸಿ ಮತದಾನದ ಹಕ್ಕನ್ನು ಖಚಿತಪಡಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ರಕ್ಷಣೆ ಮಾಡುವುದು  ಈ ಅಭಿಯಾನದ ಉದ್ದೇಶವಾಗಿದೆ’ ಎಂದು ಐವೈಸಿ ಪ್ರಕಟಣೆ ತಿಳಿಸಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.