ADVERTISEMENT

ಹಣ ಅಕ್ರಮ ವರ್ಗಾವಣೆ: ಇ.ಡಿಯಿಂದ ‘ಎಂ3ಎಂ’ ಸಮೂಹ ನಿರ್ದೇಶಕ ಬಂಧನ

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 10:55 IST
Last Updated 9 ಜೂನ್ 2023, 10:55 IST
   

ನವದೆಹಲಿ (ಪಿಟಿಐ): ಹಣ ಅಕ್ರಮ ವರ್ಗಾವಣೆ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ), ಗುರುಗ್ರಾಮ ಮೂಲದ ‘ಎಂ3ಎಂ’ ಸಮೂಹದ ನಿರ್ದೇಶಕ ರೂಪಕುಮಾರ್ ಬನ್ಸಲ್‌ ಎಂಬುವವರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

ತನಿಖೆಯ ಭಾಗವಾಗಿ ಬನ್ಸಾಲ್‌ ಅವರನ್ನು ಗುರುವಾರ ವಶಕ್ಕೆ ಪಡೆಯಲಾಗಿತ್ತು ಎಂದೂ ಅವರು ತಿಳಿಸಿದ್ದಾರೆ.

ಜೂನ್ 1ರಂದು ‘ಎಂ3ಎಂ’ ಸಮೂಹದ ಕಚೇರಿ ಹಾಗೂ ನಿರ್ದೇಶಕರಿಗೆ ಸೇರಿದ ಸ್ಥಳಗಳ ಮೇಲೆ ಇ.ಡಿ ದಾಳಿ ನಡೆಸಿತ್ತು. ದೆಹಲಿ ಮತ್ತು ಗುರುಗ್ರಾಮ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಐಆರ್‌ಇಒ’ ಎಂಬ ರಿಯಲ್ ಎಸ್ಟೇಟ್ ಸಮೂಹದ ಮೇಲೂ ದಾಳಿ ನಡೆಸಿತ್ತು.

ADVERTISEMENT

‘ಈ ಎರಡು ಸಮೂಹದ ಮೇಲೆ ನಡೆಸಿದ ದಾಳಿ ವೇಳೆ, ₹ 60 ಕೋಟಿ ಮೌಲ್ಯದ ಐಷಾರಾಮಿ ಕಾರುಗಳು, ₹ 5.75 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಇ.ಡಿ ಸೋಮವಾರ ತಿಳಿಸಿತ್ತು.

ಈ ದಾಳಿ ಹಾಗೂ ಸಮನ್ಸ್‌ ಜಾರಿ ಮಾಡಿದ ಬೆನ್ನಲ್ಲೇ, ‘ಎಂ3ಎಂ’ ಸಮೂಹದ ನಿರ್ದೇಶಕರಾದ ಬಸಂತ್ ಬನ್ಸಲ್, ರೂಪಕುಮಾರ್ ಬನ್ಸಲ್ ಹಾಗೂ ಪಂಕಜ್‌ ಬನ್ಸಲ್‌ ಅವರು, ‘ತಾವು ಯಾವುದೇ ತಪ್ಪು ಮಾಡಿಲ್ಲ’ ಎಂದು ಹೇಳಿ, ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.