ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಗ್ಯಾಂಗ್‌ಸ್ಟರ್ ಇಕ್ಬಾಲ್ ಮಿರ್ಚಿ ಕುಟುಂಬಕ್ಕೆ ಸೇರಿದ ಚಿತ್ರಮಂದಿರ, ಹೋಟೆಲ್ ಸೇರಿದಂತೆ ₹22.42 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇ.ಡಿ) ಮಂಗಳವಾರ ತಿಳಿಸಿದೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ(ಪಿಎಂಎಲ್‌ಎ)ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ಹೊರಡಿಸಲಾಗಿದೆ. ‘ಚಿತ್ರಮಂದಿರ, ಮುಂಬೈನಲ್ಲಿ ಒಂದು ಹೋಟೆಲ್, ನಿರ್ಮಾಣ ಹಂತದಲ್ಲಿರುವ ಹೋಟೆಲ್, ಒಂದು ಫಾರ್ಮ್ ಹೌಸ್, ಎರಡು ಬಂಗಲೆಗಳು, 3.5 ಎಕರೆ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ಇ.ಡಿ ತಿಳಿಸಿದೆ.
ಮೃತ ಗ್ಯಾಂಗ್‌ಸ್ಟರ್ ಮಿರ್ಚಿ ಹಾಗೂ ಆತನ ಕುಟುಂಬದ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ₹798 ಕೋಟಿ ಮೌಲ್ಯದ ಆಸ್ತಿಯನ್ನು ಇ.ಡಿ ಮುಟ್ಟುಗೋಲು ಹಾಕಿಕೊಂಡಿದೆ. ಉಗ್ರ ದಾವೂದ್ ಇಬ್ರಾಹಿಂ ಬಲಗೈ ಬಂಟ ಎನ್ನಲಾಗುತ್ತಿದ್ದ ಮಿರ್ಚಿ, ಡ್ರಗ್ಸ್ ಸರಬರಾಜು ಹಾಗೂ ವಸೂಲಿಯಂಥ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. 2003ರಲ್ಲಿ ಈತ ಲಂಡನ್‌ನಲ್ಲಿ ಮೃತಪಟ್ಟಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.