ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣ: ರಾಬರ್ಟ್ ವಾದ್ರಾ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ED

ಪಿಟಿಐ
Published 17 ಜುಲೈ 2025, 19:44 IST
Last Updated 17 ಜುಲೈ 2025, 19:44 IST
<div class="paragraphs"><p>ರಾಬರ್ಟ್ ವಾದ್ರಾ </p></div>

ರಾಬರ್ಟ್ ವಾದ್ರಾ

   

(ಪಿಟಿಐ ಚಿತ್ರ)

ನವದೆಹಲಿ: ಹರಿಯಾಣದ ಶಿಕೋಹಪುರದ ಭೂ ವ್ಯವಹಾರದಲ್ಲಿನ ಹಣ ಅಕ್ರಮ ವರ್ಗಾವಣೆ ಪ್ರಕರಣ ದಲ್ಲಿ ಜಾರಿ ನಿರ್ದೇಶ ನಾಲಯವು (ಇ.ಡಿ) ಉದ್ಯಮಿ ರಾಬರ್ಟ್‌ ವಾದ್ರಾ (56) ವಿರುದ್ಧ ಗುರುವಾರ ಆರೋಪ ಪಟ್ಟಿ ಸಲ್ಲಿಸಿದೆ. 

ADVERTISEMENT

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇಲ್ಲಿನ ರೌಸ್‌ ಅವೆನ್ಯೂ ನ್ಯಾಯಾಲಯ ದಲ್ಲಿ ಇ.ಡಿ ಆರೋಪಪಟ್ಟಿ ಸಲ್ಲಿಕೆ ಮಾಡಿದೆ. ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿಯೂ ಆಗಿರುವ ವಾದ್ರಾ ಅವರನ್ನು ಕ್ರಿಮಿನಲ್‌ ಪ್ರಕರಣದಲ್ಲಿ ಹೆಸರಿಸಿ ತನಿಖಾ ಸಂಸ್ಥೆಯೊಂದು ಪ್ರಾಸಿಕ್ಯೂಷನ್‌ ದೂರು ದಾಖಲಿಸಿರುವುದು ಇದೇ ಮೊದಲು. 

ವಾದ್ರಾ ಮತ್ತು ಅವರಿಗೆ ಸಂಬಂಧಿಸಿದ ಸಂಸ್ಥೆ ‘ಸ್ಕೈಲೈಟ್‌ ಹಾಸ್ಪಿಟಾಲಿಟಿ ಲಿಮಿಟೆಡ್‌’ ಮತ್ತು ಇತರ ಸಂಸ್ಥೆಗಳಿಗೆ ಸೇರಿದ ₹37.64 ಕೋಟಿ ಮೌಲ್ಯದ 43 ಸ್ಥಿರ ಆಸ್ತಿಗಳನ್ನೂ ಇ.ಡಿ ಮುಟ್ಟುಗೋಲು ಹಾಕಿಕೊಂಡಿದೆ. ಈ ಸಂಬಂಧ ಪಿಎಂಎಲ್‌ಎ ಅಡಿಯಲ್ಲಿ ಬುಧವಾರ ತಾತ್ಕಾಲಿಕ ಜಪ್ತಿ ಆದೇಶವನ್ನು ಇ.ಡಿ ಹೊರಡಿಸಿದೆ ಎಂದು ಮೂಲಗಳು ಹೇಳಿವೆ.  

‘ಸ್ಕೈಲೈಟ್‌ ಹಾಸ್ಪಿಟಾಲಿಟಿ ಲಿಮಿಟೆಡ್‌’, ಸತ್ಯಾನಂದ ಯಾಜೀ ಮತ್ತು ಕೇವಲ್‌ ಸಿಂಗ್‌ ವಿರ್ಕ್‌ ಅವರ ಕಂಪನಿಯಾದ ‘ಓಂಕಾರೇಶ್ವರ ಪ್ರಾಪರ್ಟೀಸ್‌ ಲಿಮಿಟೆಡ್‌’ ಸೇರಿ 11 ಸಂಸ್ಥೆಗಳನ್ನು ಆರೋಪಿಗಳೆಂದು ಹೆಸರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ತನಿಖೆಯ ಭಾಗವಾಗಿ ಇ.ಡಿ ಏಪ್ರಿಲ್‌ನಲ್ಲಿ ಸತತ ಮೂರು ದಿನ ವಾದ್ರಾ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಜಾರಿ ನಿರ್ದೇಶನಾಲಯದ ಆರೋಪ
ಗಳನ್ನು ವಾದ್ರಾ ಅವರು ಹಿಂದಿನಿಂದಲೂ ‘ರಾಜಕೀಯಪ್ರೇರಿತ’ ಕ್ರಮ ಎಂದು ನಿರಾಕರಿಸಿಕೊಂಡು ಬಂದಿದ್ದಾರೆ.

ಪ್ರಕರಣದ ವಿವರ:

ರಾಬರ್ಟ್‌ ವಾದ್ರಾ ಅವರು ತಮ್ಮ ‘ಸ್ಕೈಲೈಟ್‌ ಹಾಸ್ಟಿಟಾಲಿಟಿ ಲಿಮಿಟೆಡ್‌’ ಮೂಲಕ ‘ಓಂಕಾರೇಶ್ವರ ಪ್ರಾಪರ್ಟೀಸ್‌ ಲಿಮಿಟೆಡ್‌’ನಿಂದ 2008ರ ಫೆಬ್ರುವರಿ 12ರಂದು ಗುರುಗ್ರಾಮ ಬಳಿಯ ಶಿಕೋಹಪುರದಲ್ಲಿ 3.53 ಎಕರೆ ಜಮೀನನ್ನು ನಕಲಿ ಘೋಷಣಾ ಪ್ರಮಾಣ ಪತ್ರದ ಮೂಲಕ ₹7.5 ಕೋಟಿಗೆ ಖರೀದಿಸಿದ್ದರು. ವಾದ್ರಾ ಅವರು ತಮ್ಮ ವೈಯಕ್ತಿಕ ಪ್ರಭಾವ ಬಳಸಿ ಈ ಜಮೀನಿಗೆ ವಾಣಿಜ್ಯ ಪರವಾನಗಿಯನ್ನೂ ಪಡೆದುಕೊಂಡಿದ್ದರು. ಆ ಬಳಿಕ 2012ರಲ್ಲಿ ಈ ಜಮೀನನ್ನು ಡಿಎಲ್‌ಎಫ್‌ ರಿಯಾಲಿಟಿ ಸಂಸ್ಥೆಗೆ ₹58 ಕೋಟಿಗೆ ಮಾರಾಟ ಮಾಡಿದ್ದರು ಎಂಬ ಆರೋಪವಿದೆ. ಈ ಸಂಬಂಧ ಗುರುಗ್ರಾಮ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.  

ಅಲ್ಲದೆ ಬ್ರಿಟನ್‌ ಮೂಲದ ಶಸ್ತ್ರಾಸ್ತ್ರ ಸಲಹೆಗಾರ ಸಂಜಯ್‌ ಭಂಡಾರಿಗೆ ಸಂಬಂಧಿಸಿದ ಎರಡು ಹಣ ಅಕ್ರಮ ವರ್ಗಾವಣೆ ಪ್ರಕರಣಗಳು ಮತ್ತು ರಾಜಸ್ಥಾನದ ಬಿಕಾನೇರ್‌ ಭೂ ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣ ದಲ್ಲಿಯೂ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.