ಕೋಲ್ಕತ್ತ: ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತದ ಕೈಗಾರಿಕಾ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರನ್ನೂ ಕೋಲ್ಕತ್ತ ನ್ಯಾಯಾಲಯವು 10 ದಿನಗಳ ಕಾಲ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿದೆ.
ಭುವನೇಶ್ವರದ ಏಮ್ಸ್‌ನಲ್ಲಿ ಚಟರ್ಜಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ಅವರ ಆರೋಗ್ಯದ ಮೇಲೆ ಯಾವುದೇ ಸಕ್ರಿಯ ನಿಗಾದ ಅಗತ್ಯವಿಲ್ಲ ಎಂದು ವರದಿ ಬಂದಿತ್ತು. ಆ ಬಳಿಕ ಚಟರ್ಜಿಯವರನ್ನು 14 ದಿನಗಳ ಕಸ್ಟಡಿಗೆ ಇಡಿ ಕೋರಿತ್ತು,
ಈ ಸಂದರ್ಭ ಸಚಿವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಂಕಶಾಲಾದ ಇ.ಡಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿಬೊನ್ ಕುಮಾರ್ ಸಾಧು ಅವರು, 10 ದಿನ ಇ.ಡಿ ಕಸ್ಟಡಿಗೆ ಒಪ್ಪಿಸಿದರು. ಅರ್ಪಿತಾ ಮುಖರ್ಜಿ ಅವರನ್ನೂ ಆಗಸ್ಟ್ 3ರವರೆಗೆ ಕಸ್ಟಡಿಗೆ ನೀಡಲಾಗಿದೆ.
ಚಟರ್ಜಿ ಅವರನ್ನು ಭುವನೇಶ್ವರದ ಏಮ್ಸ್‌ಗೆ ಕರೆದೊಯ್ದು ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ನುರಿತ ವೈದ್ಯರಿಂದ ತಪಾಸಣೆ ಮಾಡಿಸುವಂತೆ ಭಾನುವಾರ ಕಲ್ಕತ್ತ ಹೈಕೋರ್ಟ್, ಇ.ಡಿ ಅಧಿಕಾರಿಗಳಿಗೆ ಸೂಚಿಸಿತ್ತು. ಅಲ್ಲದೆ, ಇಬ್ಬರೂ ಆರೋಪಿಗಳನ್ನು ಪ್ರತೀ 48 ಗಂಟೆಗೊಮ್ಮೆ ತಪಾಸಣೆ ನಡೆಸಬೇಕು ಮತ್ತು ತನಿಖಾಧಿಕಾರಿಗಳು ಅವರಿಗೆ ಕಿರುಕುಳ ನೀಡಬಾರದು ಎಂದೂ ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.