
ನವದೆಹಲಿ: ದಿವಾಳಿಯಾದ ಕಂಪನಿಗಳು ಹಾಗೂ ಅವುಗಳ ಪಾಲುದಾರರ ಆಸ್ತಿಗಳನ್ನು, ವಂಚನೆಗೊಳಗಾದ ಬ್ಯಾಂಕ್‌ಗಳು ಮತ್ತು ಹೂಡಿಕೆದಾರರ ಬಾಕಿ ತೀರಿಸಲು ಬಳಸಿಕೊಳ್ಳಲು ಅನುವಾಗುವಂತಹ ಸುತ್ತೋಲೆಯೊಂದನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ಹೊರಡಿಸಿದೆ.
ದಿವಾಳಿ ಮತ್ತು ದಿವಾಳಿ ಮಂಡಳಿಯ (ಐಬಿಬಿಐ) ಅಧಿಕಾರಿಗಳು ಹಾಗೂ ಇ.ಡಿ ತನಿಖಾಧಿಕಾರಿಗಳ ನಡುವಿನ ಹಲವು ಸುತ್ತಿನ ಸಮನ್ವಯ ಸಭೆಗಳ ನಂತರ ನ. 4ರಂದು ಈ ಸುತ್ತೋಲೆ ಹೊರಡಿಸಲಾಗಿದೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಇ.ಡಿ.ಯು ವಶಪಡಿಸಿಕೊಂಡ ವಂಚಕರ ಸ್ವತ್ತುಗಳನ್ನು ಬಾಕಿ ತೀರಿಸಲಿಕ್ಕಾಗಿ ಬಳಸಿಕೊಳ್ಳಲು ದಿವಾಳಿ ಪ್ರಕ್ರಿಯೆ ನಿರ್ವಹಿಸುವ ವೃತ್ತಿಪರರು ವಿಶೇಷ ನ್ಯಾಯಾಲಯಕ್ಕೆ ‘ಪ್ರಮಾಣಬದ್ಧ ವಾಗ್ದಾನ’ ಸಲ್ಲಿಸಬಹುದು ಎಂದಿದೆ.
ಪ್ರಸ್ತುತ, ಹಲವು ದಿವಾಳಿ ಪ್ರಕರಣಗಳಲ್ಲಿ ಕಾರ್ಪೊರೇಟ್ ಸಾಲಗಾರನ ಸ್ವತ್ತುಗಳನ್ನು ಪಿಎಂಎಲ್‌ಎ ಅಡಿ ವಶಕ್ಕೆ ಪಡೆದಿದ್ದರೂ, ಅವುಗಳ ಬಳಕೆ ನಿರ್ಬಂಧಿಸಲಾಗಿತ್ತು.
ಈ ಸಮಸ್ಯೆ ಪರಿಹಾರಕ್ಕಾಗಿಯೇ ಇ.ಡಿ ಹಾಗೂ ಐಬಿಬಿಐ, ಪ್ರಕ್ರಿಯೆ ನಡೆಯುತ್ತಿರುವಾಗ ವಶಪಡಿಸಿಕೊಂಡ ಸ್ವತ್ತುಗಳನ್ನು ವಂಚನೆಗೊಳಗಾದ ಬ್ಯಾಂಕ್‌ಗಳಿಗೆ, ಹೂಡಿಕೆದಾರರಿಗೆ ಹಿಂದಿರುಗಿಸಲು ಹೊಸ ಪ್ರಮಾಣಿತ ಕಾರ್ಯವಿಧಾನ (ಎಸ್‌ಒಪಿ) ರಚಿಸಿವೆ.
ಪಿಎಂಎಲ್‌ಎ ಸೆಕ್ಷನ್ 8 (7), 8 (8)ರಡಿ ಸಲ್ಲಿಸಿದ ಅರ್ಜಿಗಳ ಮೂಲಕ ಅಂತಹ ಸ್ವತ್ತುಗಳನ್ನು ಬಳಸಿಕೊಳ್ಳಲು, ಈ ಎಸ್‌ಒಪಿಯು ವೃತ್ತಿಪರರಿಗೆ ಅನುವು ಮಾಡಿಕೊಡುತ್ತದೆ ಎಂದು ಇ.ಡಿ ಹೇಳಿದೆ.
ಹೊಸ ಕಾರ್ಯವಿಧಾನವು ವಶಪಡಿಸಿಕೊಂಡ ಸ್ವತ್ತುಗಳನ್ನು ವಂಚನೆಗೊಳಗಾದವರ ಪ್ರಯೋಜನಕ್ಕಾಗಿ ಮಾತ್ರ ಬಳಸುತ್ತದೆ ಎಂಬುದನ್ನು ಖಚಿತಪಡಿಸುತ್ತದೆ. ಆರೋಪಿಗೆ ಯಾವುದೇ ಲಾಭವನ್ನು ಮಾಡಿಕೊಡಲ್ಲ. ಪ್ರಕ್ರಿಯೆಯು ಅಂತಿಮಗೊಳ್ಳುವವರೆಗೆ ಸುರಕ್ಷತೆಯು ಜಾರಿಯಲ್ಲಿರುತ್ತದೆ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.