ADVERTISEMENT

ನ್ಯೂಸ್‌ಕ್ಲಿಕ್‌, ಪುರಕಾಯಸ್ಥಗೆ ₹184 ಕೋಟಿ ದಂಡ: ಇ.ಡಿ

ಪಿಟಿಐ
Published 16 ಫೆಬ್ರುವರಿ 2026, 16:53 IST
Last Updated 16 ಫೆಬ್ರುವರಿ 2026, 16:53 IST
ಪ್ರಬೀರ್‌ ಪುರಕಾಯಸ್ಥ
ಪ್ರಬೀರ್‌ ಪುರಕಾಯಸ್ಥ   

ನವದೆಹಲಿ: ‘ನ್ಯೂಸ್‌ಕ್ಲಿಕ್‌’ ಸುದ್ದಿ ಪೋರ್ಟಲ್‌ ಹಾಗೂ ಅದರ ಪ್ರಧಾನ ಸಂಪಾದಕ ಪ್ರಬೀರ್‌ ಪುರಕಾಯಸ್ಥ ಅವರಿಗೆ ಜಾರಿ ನಿರ್ದೇಶನಾಲಯವು (ಇ.ಡಿ) ‘ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ’ಯಡಿ (ಎಫ್‌ಇಎಂಎ) ₹184 ಕೋಟಿ ದಂಡ ವಿಧಿಸಿದೆ.

ಪೋರ್ಟಲ್‌ನ ಮಾಲೀಕತ್ವ ಹೊಂದಿರುವ ‘ಪಿಪಿಕೆ ನ್ಯೂಸ್‌ಕ್ಲಿಕ್ ಸ್ಟುಡಿಯೊ ಪ್ರೈವೆಟ್‌ ಲಿಮಿಟೆಡ್‌’ ಕಂಪನಿಗೆ ₹120 ಕೋಟಿ ದಂಡ ವಿಧಿಸಲಾಗಿದೆ. ಜತೆಗೆ, ನಿಯಮ ಉಲ್ಲಂಘನೆ ಆರೋಪದಡಿ ಸಂಸ್ಥೆಯ ಸಂಸ್ಥಾಪಕ ಪ್ರಬೀರ್‌ ಪುರಕಾಯಸ್ಥ ಅವರಿಗೂ ₹64 ಕೋಟಿ ದಂಡ ವಿಧಿಸಲಾಗಿದೆ ಎಂದು ಇ.ಡಿ ಮೂಲಗಳು ಸೋಮವಾರ ತಿಳಿಸಿವೆ.

ಈ ಸಂಸ್ಥೆಗಳು ಎಫ್‌ಇಎಂಎನ ನಿಬಂಧನೆಗಳನ್ನು ಉಲ್ಲಂಘಿಸಿವೆ. ವಿದೇಶಿ ನೇರ ಹೂಡಿಕೆಯ (ಎಫ್‌ಡಿಐ) ಮೂಲಕ ಬಂದ ಹಣದ ದುರ್ಬಳಕೆ ಹಾಗೂ ತಮ್ಮ ಸೇವೆಗಳ ಬಗ್ಗೆ ಸುಳ್ಳು ಮಾಹಿತಿ ನೀಡಿವೆ ಎಂದು ಆರೋಪಿಸಿದೆ.

ADVERTISEMENT

ಈ ಬೆಳವಣಿಗೆ ಕುರಿತು ‘ನ್ಯೂಸ್‌ಕ್ಲಿಕ್‌’ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

2021ರ ಸೆಪ್ಟೆಂಬರ್‌ನಲ್ಲಿ ನವದೆಹಲಿಯ ಸೈದುಲಾಜಾಬ್‌ ಪ್ರದೇಶದಲ್ಲಿರುವ ‘ನ್ಯೂಸ್‌ಕ್ಲಿಕ್‌’ ಸಂಸ್ಥೆ ಮೇಲೆ ಹಣ ಅಕ್ರಮ ವರ್ಗಾವಣೆ ಆರೋಪದಡಿ ಇ.ಡಿ ಮೊದಲ ಬಾರಿಗೆ ದಾಳಿ ಮಾಡಿತ್ತು. ಈ ಪ್ರಕರಣದಲ್ಲಿ ಪುರಕಾಯಸ್ಥ ಸೇರಿದಂತೆ 25ಕ್ಕೂ ಹೆಚ್ಚು ಜನರ ಹೇಳಿಕೆಗಳನ್ನು ಇ.ಡಿ ದಾಖಲಿಸಿತ್ತು.

‘ನ್ಯೂಸ್‌ಕ್ಲಿಕ್‌ ಪೋರ್ಟಲ್‌ ಮತ್ತು ಅದರ ಮಾಲೀಕರು ಅಕ್ರಮ ಎಸಗಿದ್ದಾರೆ’ ಎಂದು ಬಿಜೆಪಿಯು ‘ನ್ಯೂಯಾರ್ಕ್‌ ಟೈಮ್ಸ್‌’ ಪತ್ರಿಕೆಯ ವರದಿಯನ್ನು ಉಲ್ಲೇಖಿಸಿ 2023ರಲ್ಲಿ ಆರೋಪಿಸಿತ್ತು. ಆ ಪತ್ರಿಕಾ ವರದಿ ಪ್ರಕಾರ, ಈ ಪೋರ್ಟಲ್‌ ಅಮೆರಿಕದ ಉದ್ಯಮಿ ನೆವಿಲ್ಲೆ ರಾಯ್ ಸಿಂಘಮ್ ಅವರಿಂದ ಹಣಕಾಸಿನ ನೆರವು ಪಡೆದಿದೆ. ಸಿಂಘಮ್‌ ಅವರು ಚೀನಾ ಸರ್ಕಾರದ ಮಾಧ್ಯಮ ಪ್ರಚಾರದ ವ್ಯವಸ್ಥೆಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.