ಜೈಪುರ: ಚಿಟ್ ಫಂಡ್ ಪ್ರಕರಣವೊಂದರ ಇತ್ಯರ್ಥ ಸಂಬಂಧ ₹15 ಲಕ್ಷ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಮಣಿಪುರಕ್ಕೆ ನೇಮಕವಾಗಿರುವ ಜಾರಿ ನಿರ್ದೆಶನಾಲಯದ ಅಧಿಕಾರಿ ಮತ್ತು ಸಹಚರರನ್ನು ಜೈಪುರದಲ್ಲಿ ಭ್ರಷ್ಟಾಚಾರ ನಿಗ್ರಹ ದಳವು(ಎಸಿಬಿ) ಬಂಧಿಸಿದೆ.
ಜೈಪುರ ಜಿಲ್ಲೆಯ ವಿಮಲಪುರದ ನಿವಾಸಿ, ಇ.ಡಿ ಅಧಿಕಾರಿ ನವಲ್ ಕಿಶೋರ್ ಕುಮಾರ್, ಮುಂಡಾವರ್ ಉಪ ನೊಂದಾವಣಾಧಿಕಾರಿ ಕಚೇರಿ ಸಿಬ್ಬಂದಿ ಕಿಶೋರ್ ಮೀನಾ ಬಂಧಿತರು.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಇ.ಡಿ, ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿ ತನಿಖೆ ನಡೆಸುವುದಾಗಿ ಹೇಳಿದೆ.
ಚಿಟ್ ಫಂಡ್ ವಿಷಯದಲ್ಲಿ ದೂರುದಾರರ ವಿರುದ್ಧ ಮಣಿಪುರ ರಾಜಧಾನಿ ಇಂಫಾಲ್‌ನಲ್ಲಿರುವ ಇ.ಡಿ ಕಚೇರಿಯಲ್ಲಿ ದಾಖಲಾಗಿರುವ ಪ್ರಕರಣವನ್ನು ಇತ್ಯರ್ಥಪಡಿಸಲು ನವಲ್ ಕಿಶೋರ್ ₹17 ಲಕ್ಷ ಬೇಡಿಕೆಯಿಟ್ಟಿದ್ದರು ಎಂದು ಎಸಿಬಿ ತಿಳಿಸಿದೆ.
ಇಂಫಾಲದಲ್ಲಿರುವ ಇಡಿ ಕಚೇರಿಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಇತ್ಯರ್ಥಪಡಿಸಲು ನವಲ್ ಕಿಶೋರ್ ಅವರು ₹17 ಲಕ್ಷ ರೂಪಾಯಿ ಲಂಚ ಕೇಳಿದ್ದಾರೆ ಎಂದು ದೂರುದಾರರು ತನಿಖಾ ಸಂಸ್ಥೆಗೆ ತಿಳಿಸಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ದೂರನ್ನು ಪರಿಶೀಲಿಸಿದ ನಂತರ ತಂಡವು ಲಂಚ ಪಡೆದ ಆರೋಪದ ಮೇಲೆ ಅವರನ್ನು ಬಂಧಿಸಿದೆ ಎಂದು ಎಸಿಬಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.