ADVERTISEMENT

ಪಶ್ಚಿಮ ಬಂಗಾಳ: ಇ.ಡಿ ಅಧಿಕಾರಿಗಳ ಮೇಲೆ ಹಲ್ಲೆ

ಪಿಟಿಐ
Published 6 ಜನವರಿ 2024, 0:30 IST
Last Updated 6 ಜನವರಿ 2024, 0:30 IST
<div class="paragraphs"><p>ದಾಳಿಯಲ್ಲಿ ಜಖಂಗೊಂಡಿರುವ ವಾಹನ </p></div>

ದಾಳಿಯಲ್ಲಿ ಜಖಂಗೊಂಡಿರುವ ವಾಹನ

   

–ಪಿಟಿಐ ಚಿತ್ರ

ಕೋಲ್ಕತ್ತ/ನವದೆಹಲಿ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಮುಖಂಡನ ಮನೆಗೆ ಹಗರಣವೊಂದಕ್ಕೆ ಸಂಬಂಧಿಸಿದಂತೆ ಶೋಧ ನಡೆಸಲು ಬಂದ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಮೇಲೆ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. 

ADVERTISEMENT

ಟಿಎಂಸಿ ಬೆಂಬಲಿಗರು ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ. ಶುಕ್ರವಾರ ಬೆಳಿಗ್ಗೆ ನಡೆದ ಈ ಘಟನೆ, ಬಂಗಾಳದ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ. ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಹದಗೆಟ್ಟಿರುವುದಾಗಿ ಆರೋಪಿಸಿರುವ ವಿಪಕ್ಷಗಳು, ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಆಗ್ರಹಿಸಿವೆ.

ರಾಜ್ಯಪಾಲ ಸಿ.ವಿ.ಆನಂದ್‌ ಬೋಸ್‌ ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ‘ಎಲ್ಲ ಸಾಂವಿಧಾನಿಕ ಆಯ್ಕೆ’ಗಳನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ. ಆರೋಪಗಳನ್ನು ತಳ್ಳಿ ಹಾಕಿರುವ ಟಿಎಂಸಿ, ‘ಇ.ಡಿ ಅಧಿಕಾರಿಗಳು ಜನರನ್ನು ಪ್ರಚೋದಿಸಿದ್ದಾರೆ’ ಎಂದು ದೂರಿದೆ.

ಏನಿದು ಘಟನೆ?: 

ಪಡಿತರ ವಿತರಣೆಯಲ್ಲಿ ನಡೆದಿರುವ ಹಗರಣ ಸಂಬಂಧ ಇ.ಡಿ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಏಕಕಾಲದಲ್ಲಿ ಪಶ್ಚಿಮ ಬಂಗಾಳದ 15 ಕಡೆ ದಾಳಿ ನಡೆಸಿದ್ದಾರೆ. ಅಧಿಕಾರಿಗಳ ತಂಡವೊಂದು ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲೀ ಎಂಬಲ್ಲಿರುವ ಟಿಎಂಸಿ ನಾಯಕ ಶೇಖ್‌ ಶಾಜಹಾನ್‌ ಅವರ ಮನೆಯಲ್ಲಿ ಶೋಧಕ್ಕೆ ಮುಂದಾಗಿದೆ. 

ಶಾಜಹಾನ್‌ ಅವರು ಇದೇ ಹಗರಣದಲ್ಲಿ ಬಂಧಿತರಾಗಿರುವ ಸಚಿವ ಜ್ಯೋತಿಪ್ರಿಯೊ ಮಲಿಕ್‌ ಅವರ ಆಪ್ತರಾಗಿದ್ದಾರೆ. ಹಗರಣದ ತನಿಖೆಯ ಭಾಗವಾಗಿ ಇ.ಡಿ ದಾಳಿ ನಡೆಸಿತ್ತು. ಇ.ಡಿ ಅಧಿಕಾರಿಗಳು ಶಾಜಹಾನ್‌ ಮನೆಗೆ ಬಂದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿದರು.

‘ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಟಿಎಂಸಿ ಬೆಂಬಲಿಗರು ಮೊದಲು ಇ.ಡಿ ಅಧಿಕಾರಿಗಳು ಮತ್ತು ಅವರ ಭದ್ರತೆಗೆ ಬಂದಿದ್ದ ಸಿಆರ್‌ಪಿಎಫ್‌ ಸಿಬ್ಬಂದಿಗೆ ಘೇರಾವ್‌ ಹಾಕಿದರು. ಆ ಬಳಿಕ ಏಕಾಏಕಿ ಹಲ್ಲೆ ನಡೆಸಿದರು’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ದಾಳಿಕೋರರು ವಾಹನಗಳನ್ನೂ ಜಖಂಗೊಳಿಸಿದರು. ಇದರಿಂದ ಅಧಿಕಾರಿಗಳು ತಮ್ಮ ವಾಹನಗಳನ್ನು ಅಲ್ಲೇ ಬಿಟ್ಟು, ಆಟೊ ರಿಕ್ಷಾ ಮತ್ತು ದ್ವಿಚಕ್ರ ವಾಹನಗಳಲ್ಲಿ ಸಂದೇಶ್‌ಖಾಲೀ ಪ್ರದೇಶದಿಂದ ಹೊರಗೆ ಸುರಕ್ಷಿತ ತಾಣಕ್ಕೆ ತೆರಳಬೇಕಾಯಿತು’ ಎಂದು ಘಟನೆಯನ್ನು ವಿವರಿಸಿದರು. ‘ಹಿಂದೆಂದೂ ಈ ರೀತಿಯ ದಾಳಿ ನಡೆದ ಉದಾಹರಣೆಗಳಿಲ್ಲ. ದಾಳಿಯಿಂದ ತಪ್ಪಿಸಿಕೊಳ್ಳಲು ನಮ್ಮ ಅಧಿಕಾರಿಗಳು ಸ್ಥಳದಿಂದ ಓಡಿಹೋಗಬೇಕಾಯಿತು’ ಎಂದರು. 

ಘಟನೆಗೆ ಸಂಬಂಧಿಸಿದಂತೆ ಪೊಲೀಸರು 10 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇ.ಡಿ ದಾಳಿಯ ವರದಿ ಮಾಡಲು ಸ್ಥಳಕ್ಕೆ ಬಂದಿದ್ದ ಪತ್ರಕರ್ತರ ಮೇಲೂ ಹಲ್ಲೆ ನಡೆದಿದೆ. ‘ಕೆಲವು ಪತ್ರಕರ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. 

800ರಿಂದ 1000 ಮಂದಿ ಇದ್ದರು: ‘ಶೇಖ್‌ ಶಾಜಹಾನ್ ಮನೆಗೆ ಹೋದ ಅಧಿಕಾರಿಗಳು ಮತ್ತು ಸಿಆರ್‌ಪಿಎಫ್‌ನ 27 ಸಿಬ್ಬಂದಿ ಮೇಲೆ 800ರಿಂದ 1000 ಮಂದಿ ದಾಳಿ ನಡೆಸಿದ್ದಾರೆ. ಕೈಯಲ್ಲಿ ಲಾಠಿ, ಕಲ್ಲು ಹಾಗೂ ಇಟ್ಟಿಗೆಗಳನ್ನು ಹಿಡಿದುಕೊಂಡಿದ್ದ ದಾಳಿಕೋರರು ಏಕಾಏಕಿ ನುಗ್ಗಿ ಬಂದಿದ್ದಾರೆ’ ಎಂದು ಇ.ಡಿ ನವದೆಹಲಿಯ ಕಚೇರಿ ಬಿಡುಗಡೆಗೊಳಿಸಿದ ಪ್ರಕಟಣೆ ತಿಳಿಸಿದೆ.

‘ಮೂವರು ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಧಿಕಾರಿಗಳ ಮೊಬೈಲ್‌ ಫೋನ್‌ಗಳು, ಲ್ಯಾಪ್‌ಟಾಪ್‌ ಮತ್ತು ಪರ್ಸ್‌ಗಳನ್ನು ಜನರ ಗುಂಪು ಕಸಿದುಕೊಂಡಿದೆ. ಘಟನೆ ಬಗ್ಗೆ ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿದೆ’ ಎಂದು ಹೇಳಿದೆ.

ಟಿಎಂಸಿ ಬೆಂಬಲಿಗರಿಂದ ಕೃತ್ಯ ಆರೋಪ ರಾಜಕೀಯ ಕೋಲಾಹಲ ಎಬ್ಬಿಸಿದ ಘಟನೆ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ವಿಪಕ್ಷಗಳ ಒತ್ತಾಯ

****

ಟಿಎಂಸಿ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪಶ್ಚಿಮ ಬಂಗಾಳದಲ್ಲಿ ತಕ್ಷಣದಿಂದಲೇ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿ

-ಅಧೀರ್‌ ರಂಜನ್‌ ಚೌಧರಿ ಬಂಗಾಳ ಕಾಂಗ್ರೆಸ್‌ ಅಧ್ಯಕ್ಷ

ಘೋರ ಘಟನೆ: ರಾಜ್ಯಪಾಲ

ಇ.ಡಿ ಅಧಿಕಾರಿಗಳ ಮೇಲಿನ ಹಲ್ಲೆಯನ್ನು ರಾಜ್ಯಪಾಲ ಸಿ.ವಿ.ಆನಂದ್‌ ಬೋಸ್‌ ಅವರು ತೀಕ್ಷ್ಣ ಮಾತುಗಳಿಂದ ಖಂಡಿಸಿದ್ದಾರೆ. ‘ಸಂದೇಶ್‌ಖಾಲೀಯಲ್ಲಿ ನಡೆದ ಘೋರ ಘಟನೆ ಆತಂಕಕಾರಿಯಾಗಿದೆ’ ಎಂದಿದ್ದಾರೆ.  ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನಾಗರಿಕತೆ ಮತ್ತು ವಿಧ್ವಂಸಕತೆಯನ್ನು ತಡೆಯುವುದು ಸುಸಂಸ್ಕೃತ ಸರ್ಕಾರದ ಕರ್ತವ್ಯವಾಗಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕಾಗಿ ನನ್ನ ಮುಂದಿರುವ ಎಲ್ಲಾ ಸಾಂವಿಧಾನಿಕ ಆಯ್ಕೆಗಳನ್ನು ಪರಿಶೀಲಿಸುತ್ತೇನೆ’ ಎಂದು ರಾಜಭವನ ಹೊರಡಿಸಿದ ಧ್ವನಿಮುದ್ರಿತ ಸಂದೇಶದಲ್ಲಿ ತಿಳಿಸಿದ್ದಾರೆ.

ಮಮತಾ ರಾಜೀನಾಮೆಗೆ ಬಿಜೆಪಿ ಆಗ್ರಹ

ನವದೆಹಲಿ: ‘ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲಿ. ಜನರು ಹಾಗೂ ಇ.ಡಿ ಅಧಿಕಾರಿಗಳ ಕ್ಷಮೆಯಾಚಿಸಲಿ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ಆಗ್ರಹಿಸಿದ್ದಾರೆ. ಬಂಗಾಳದಲ್ಲಿ ‘ಜಂಗಲ್‌ ರಾಜ್‌’ ಇದೆ ಎಂದು ಟೀಕಿಸಿರುವ ಅವರು ‘ದಾಳಿ ನಡೆಸಿದವರಲ್ಲಿ ರೋಹಿಂಗ್ಯಾಗಳು ಮತ್ತು ಅಕ್ರಮ ವಲಸಿಗರೂ ಇದ್ದರು’ ಎಂದು ಆರೋಪಿಸಿದರು. ‘ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸರ್ಕಾರದ ಆಡಳಿತ ಮುಂದುವರಿದರೆ ರಾಷ್ಟ್ರೀಯ ಭದ್ರತೆಗೆ ಅಪಾಯವಿದೆ’ ಎಂದು ಬಿಜೆಪಿ ಪಶ್ಚಿಮ ಬಂಗಾಳ ಸಹ ಉಸ್ತುವಾರಿ ಅಮಿತ್‌ ಮಾಳವೀಯಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.