ADVERTISEMENT

ಅಸ್ಸಾಂನ ಎಸ್‌ಸಿಇಆರ್‌ಟಿಯಲ್ಲಿ ವಂಚನೆ: ಜಾರಿ ನಿರ್ದೇಶನಾಲಯ ಶೋಧ

ಅಸ್ಸಾಂನ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯಲ್ಲಿನ ಹಗರಣ

ಪಿಟಿಐ
Published 5 ಆಗಸ್ಟ್ 2025, 13:31 IST
Last Updated 5 ಆಗಸ್ಟ್ 2025, 13:31 IST
   

ಗುವಾಹಟಿ : ಅಸ್ಸಾಂನ ಎಸ್‌ಸಿಇಆರ್‌ಟಿಯಲ್ಲಿ ನಡೆದಿದೆ ಎನ್ನಲಾದ ₹105 ಕೋಟಿ ಮೊತ್ತದ ಹಗರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಐಎಎಸ್‌ ಅಧಿಕಾರಿ ಸೇವಾಲಿ ದೇವಿ ಶರ್ಮಾಗೆ ಸಂಬಂಧಿಸಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಮಂಗಳವಾರ ಶೋಧ ನಡೆಸಿದೆ.

ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎಸ್‌ಸಿಇಆರ್‌ಟಿ) ಮಾಜಿ ಕಾರ್ಯನಿರ್ವಾಹಕ ಅಧ್ಯಕ್ಷ ಹಾಗೂ ನಿರ್ದೇಶಕರಾಗಿದ್ದ ಶರ್ಮಾ ಮತ್ತು ಅವರ ಆಪ್ತರ  ಕನಿಷ್ಠ ಎಂಟು ಸ್ಥಳಗಳಲ್ಲಿ ಹಣ ಅಕ್ರಮ ವರ್ಗಾವಣೆ ತಡೆಗಟ್ಟುವಿಕೆ ಕಾಯ್ದೆ ಅಡಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಸ್ಸಾಂ ಮುಖ್ಯಮಂತ್ರಿ ಅವರ ವಿಶೇಷ ಜಾಗೃತ ದಳದ ನಿರ್ದೇಶನದ ಮೇರೆಗೆ ರಾಜ್ಯ ಪೊಲೀಸರು 2023ರಲ್ಲಿ ಎಫ್‌ಐಆರ್‌ ದಾಖಲಿಸಿದ್ದರು. ಪ್ರಕರಣ ದಾಖಲಾದ ಕೆಲವೇ ದಿನಗಳಲ್ಲಿ ಪೊಲೀಸರು ಶರ್ಮಾ ಅವರನ್ನು ರಾಜಸ್ಥಾನದಲ್ಲಿ ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕಳೆದ ಮಾರ್ಚ್‌ನಲ್ಲಿ ಶರ್ಮಾ ಅವರಿಗೆ ಜಾಮೀನು ನೀಡಿತ್ತು.

ADVERTISEMENT

ಶರ್ಮಾ ಅವರು ₹5.7 ಕೋಟಿ ಮೌಲ್ಯದ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ದೂರಿ ಪೊಲೀಸರು ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಸ್‌ಸಿಇಆರ್‌ಟಿಯಲ್ಲಿ 2017ರಿಂದ 20ರವರೆಗೆ ಅಧಿಕಾರದಲ್ಲಿದ್ದಾಗ ಶರ್ಮಾ ಹಲವು ಅಕ್ರಮ ಎಸಗಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.