ADVERTISEMENT

ಚಿನ್ನದ ಕಳ್ಳಸಾಗಣೆ: ಇಡಿಯಿಂದ ಹಣ ಅಕ್ರಮ ವರ್ಗಾವಣೆ ಪ್ರಕರಣ

ಪಿಟಿಐ
Published 22 ಜುಲೈ 2020, 14:44 IST
Last Updated 22 ಜುಲೈ 2020, 14:44 IST
ಪ್ರಕರಣದ ಪ್ರಮುಖ ಆರೋಪಿಗಳಾದ ಸ್ವಪ್ನ ಸುರೇಶ್ ಹಾಗೂ ಸಂದೀಪ್‌ ನಾಯರ್‌( ಮಧ್ಯದಲ್ಲಿ ಇರುವವರು)
ಪ್ರಕರಣದ ಪ್ರಮುಖ ಆರೋಪಿಗಳಾದ ಸ್ವಪ್ನ ಸುರೇಶ್ ಹಾಗೂ ಸಂದೀಪ್‌ ನಾಯರ್‌( ಮಧ್ಯದಲ್ಲಿ ಇರುವವರು)   

ನವದೆಹಲಿ: ಕೇರಳದಲ್ಲಿ ರಾಜತಾಂತ್ರಿಕ ಮಾರ್ಗವನ್ನು ದುರುಪಯೋಗಪಡಿಸಿಕೊಂಡುಚಿನ್ನ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ದಾಖಲಿಸಿದ ದೂರನ್ನು ಪರಿಶೀಲಿಸಿ,ಪೊಲೀಸ್‌ ಎಫ್‌ಐಆರ್‌ಗೆ ಸಮನಾದ, ‘ಎನ್‌ಫೋರ್ಸ್‌ಮೆಂಟ್‌ ಕೇಸ್‌ ಇನ್ಫಾರ್ಮೇಷನ್‌ ರಿಪೋರ್ಟ್‌’(ಇಸಿಐಆರ್‌) ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ(ಪಿಎಂಎಲ್‌ಎ) ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳ ಹೇಳಿಕೆಗಳನ್ನು ಸಂಸ್ಥೆಯು ದಾಖಲಿಸಿಕೊಳ್ಳಲಿದೆ ಎಂದು ಮಾಹಿತಿ ನೀಡಿದರು. ಈ ಕಾಯ್ದೆಯಡಿ ಆರೋಪಿಗಳ ಚರಾಸ್ತಿ ಹಾಗೂ ಸ್ಥಿರಾಸ್ತಿಗಳನ್ನೂ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಇ.ಡಿಗೆ ಇದೆ.

ಪ್ರಕರಣವೇನು?: ಜುಲೈ 5ರಂದು ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಲ್ಫ್‌ನಿಂದ ಬಂದ ಏರ್‌ ಕಾರ್ಗೊದಲ್ಲಿದ್ದ ಬ್ಯಾಗ್ ಒಂದರಲ್ಲಿ 15 ಕೋಟಿ ಮೌಲ್ಯದ 30 ಕೆ.ಜಿ. ಬಂಗಾರವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಪ್ರಕರಣದ ತನಿಖೆಯನ್ನು ಕಸ್ಟಮ್ಸ್‌, ಎನ್‌ಐಎ ಹಾಗೂ ಆದಾಯ ತೆರಿಗೆ ಇಲಾಖೆ ಕೈಗೆತ್ತಿಕೊಂಡಿತ್ತು. ಜುಲೈ 11ರಂದು ಎನ್‌ಐಎ, ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಹಾಗೂ ಆಕೆಯ ಜೊತೆಗಿದ್ದ ಸಂದೀಪ್‌ ನಾಯರ್‌ ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಿತ್ತು. ಅಕ್ರಮವಾಗಿ ಚಿನ್ನ ಸಾಗಣೆಗೆ ಆರೋಪಿಗಳು ರಾಜತಾಂತ್ರಿಕ ಮಾರ್ಗವನ್ನು ಬಳಸಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್‌ ಅವರನ್ನು ಮಂಗಳವಾರ ಹುದ್ದೆಯಿಂದ ತೆರವುಗೊಳಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.