ADVERTISEMENT

ಮಹಾರಾಷ್ಟ್ರ: ಅಜಿತ್ ಪವಾರ್‌ಗೆ ಸೇರಿದ ₹ 65 ಕೋಟಿ ಮೌಲ್ಯದ ಕಾರ್ಖಾನೆ ಮುಟ್ಟುಗೋಲು

ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ ಹಗರಣ

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 15:02 IST
Last Updated 2 ಜುಲೈ 2021, 15:02 IST
ಅಜಿತ್‌ ಪವಾರ್‌
ಅಜಿತ್‌ ಪವಾರ್‌   

ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಅವರಿಗೆ ಸಂಬಂಧಿಸಿದ ಸತಾರದ ಸಕ್ಕರೆ ಕಾರ್ಖಾನೆಯ ಸುಮಾರು ₹65 ಕೋಟಿ ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.

ಇದರಿಂದಾಗಿ ಮಹಾ ವಿಕಾಸ್ ಅಘಾಡಿ ಸರ್ಕಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಎನ್‌ಸಿಪಿ, ಇದು ತನ್ನ ಪಕ್ಷ ಮತ್ತು ಅದರ ನಾಯಕರನ್ನು ಕೆಣಕುವ ಕ್ರಮವಲ್ಲದೆ ಮತ್ತೇನೂ ಅಲ್ಲ ಎಂದು ಹೇಳಿದೆ.

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಸೋದರಳಿಯನಾದ ಅಜಿತ್ ಪವಾರ್, ಈ ಬಗ್ಗೆ ಕಾನೂನು ಸಲಹೆ ಪಡೆಯುವುದಾಗಿ ಹೇಳಿದರು.

ADVERTISEMENT

ಪುಣೆಯಲ್ಲಿ ಪ್ರತಿಕ್ರಿಯಿಸಿರುವ ಅವರು ‘ಇ.ಡಿ ಗೆ ವಿಚಾರಣೆ ನಡೆಸುವ ಹಕ್ಕಿದೆ. ಈ ಮೊದಲು ರಾಜ್ಯದ ಸಿಐಡಿ ಮತ್ತು ಭ್ರಷ್ಟಾಚಾರ ನಿಗ್ರಹ ದಳ ತನಿಖೆ ನಡೆಸಿದರೂ ಏನೂ ಸಿಗಲಿಲ್ಲ. ಆರ್ಥಿಕ ಅಪರಾಧಗಳ ವಿಭಾಗದ ತನಿಖೆ ಕೂಡ ನಡೆಯುತ್ತಿದೆ. ನ್ಯಾಯಾಂಗ ತನಿಖೆಯನ್ನೂ ನಡೆಸಲಾಗಿದೆ. ಎಲ್ಲ ಕಡೆಯಿಂದಲೂ ತನಿಖೆ ನಡೆಯುತ್ತಿದೆ. ಆದರೆ, ಏನೂ ಹೊರಬಂದಿಲ್ಲ’ ಎಂದು ಹೇಳಿದ್ದಾರೆ.

‘ನೀವು ಇದನ್ನು ಹಗರಣ ಎಂದು ಹೇಳುತ್ತಿದ್ದೀರಿ. ದಯವಿಟ್ಟು ಏನು ಹಗರಣವೆಂದು ನನಗೆ ತೋರಿಸಿ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಅಜಿತ್ ಪವಾರ್ ಮತ್ತು ಅವರ ಕುಟುಂಬ ಸದಸ್ಯರು ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ಆದರೆ, ಇ.ಡಿ ಸಕ್ಕರೆ ಕಾರ್ಖಾನೆಗೆ ಬೀಗಮುದ್ರೆ ಹಾಕಿ, ಕಾನೂನು ಕ್ರಮ ತೆಗೆದುಕೊಳ್ಳುತ್ತಿದೆ’ ಎಂದು ಎನ್‌ಸಿಪಿ ಮುಖ್ಯ ವಕ್ತಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ದೂರಿದರು.

ವರದಿಗಳ ಪ್ರಕಾರ, ಜರಾಂಡೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಭೂಮಿ, ಕಟ್ಟಡ, ಸ್ಥಾವರ ಮತ್ತು ಯಂತ್ರೋಪಕರಣಗಳು ಸೇರಿ ₹65.75 ಕೋಟಿ ಮೌಲ್ಯದ ಆಸ್ತಿಗಳನ್ನು ಇ.ಡಿ ಮುಟ್ಟುಗೋಲು ಹಾಕಿಕೊಂಡಿದೆ. ಈ ಆಸ್ತಿ ಗುರು ಕಮಾಡಿಟಿ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಜರಾಂಡೇಶ್ವರ ಶುಗರ್ ಮಿಲ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿದ್ದು, ಅದರಲ್ಲಿ ಹೆಚ್ಚಿನ ಷೇರುಗಳನ್ನು ಸ್ಪಾರ್ಕ್ಲಿಂಗ್ ಸಾಯಿಲ್ ಪ್ರೈವೇಟ್ ಲಿಮಿಟೆಡ್ ಹೊಂದಿದೆ. ಇದರೊಂದಿಗೆ ಅಜಿತ್ ಪವಾರ್ ಮತ್ತು ಅವರ ಪತ್ನಿ ಸುನೇತ್ರ ಪವಾರ್ ಅವರ ನಂಟಿದೆ.

ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ (ಎಂಎಸ್‌ಸಿಬಿ) ಹಗರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಇ.ಡಿ ಸಕ್ಕರೆ ಕಾರ್ಖಾನೆಯ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.

ಸೇನೆ ನಿಯೋಜಿಸಿದರೂ ಏನೂ ಬದಲಾಗದು
‘ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ’ ಎಂದು ಶಿವಸೇನೆ ಮುಖ್ಯ ವಕ್ತಾರ ಸಂಜಯ್ ರಾವತ್‌ ಪ್ರತಿಕ್ರಿಯಿಸಿದ್ದಾರೆ.

‘ಇ.ಡಿ ಮತ್ತು ಸಿಬಿಐ ನಡೆಸುತ್ತಿರುವ ವಿವಾದಿತ ತನಿಖೆಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದರಿಂದ ಮಹಾರಾಷ್ಟ್ರ ಸರ್ಕಾರವನ್ನು ಬೀಳಿಸಬಹುದು ಎಂದು ಯಾರಾದರೂ ಭಾವಿಸಿದರೆ, ಅವರದು ತಪ್ಪು ಭಾವನೆ. ಇಲ್ಲಿ ಸೈನ್ಯ ನಿಯೋಜಿಸಿದರೂ ಏನೂ ಬದಲಾಗದು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.