ಹೈದರಾಬಾದ್: ಹೈದರಾಬಾದ್‌ನಲ್ಲಿ ನಡೆದಿದ್ದ ಫಾರ್ಮುಲಾ ಇ–ರೇಸ್‌ಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜ.7ರಂದು ವಿಚಾರಣೆಗೆ ಹಾಜರಾಗುವಂತೆ ಭಾರತ್ ರಾಷ್ಟ್ರ ಸಮಿತಿ ನಾಯಕ ಕೆ.ಟಿ.ರಾಮರಾವ್ ಮತ್ತು ಇತರೆ ಕೆಲವರಿಗೆ ಜಾರಿ ನಿರ್ದೇಶನಾಲಯವು (ಇ.ಡಿ) ಸಮನ್ಸ್ ನೀಡಿದೆ.
ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ದೂರು ಆಧರಿಸಿ, ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣದ ಮಾಹಿತಿ ವರದಿ (ಇಸಿಐಆರ್) ದಾಖಲಿಸಿತ್ತು.
ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಪುತ್ರ, ಬಿಆರ್‌ಎಸ್ ಕಾರ್ಯಾಧ್ಯಕ್ಷ ರಾಮರಾವ್ ಅವರಿಗೆ ಜ.7ರಂದು ಹೇಳಿಕೆ ದಾಖಲಿಸಲು ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಿರಿಯ ಐಎಎಸ್ ಅಧಿಕಾರಿ ಅರವಿಂದ್ ಕುಮಾರ್, ನಿವೃತ್ತ ಅಧಿಕಾರಿ ಹಾಗೂ ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ಬಿಎಲ್‌ಎನ್ ರೆಡ್ಡಿ ಅವರಿಗೆ ಜ.2 ಹಾಗೂ ಜ.3ರಂದು ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.
ಫಾರ್ಮುಲಾ ಇ–ರೇಸ್‌ಗೆ ₹55 ಕೋಟಿ ಪಾವತಿಸಲಾಗಿದ್ದು, ಇದರಲ್ಲಿ ವಿದೇಶ ಕರೆನ್ಸಿಯನ್ನೂ ಕೂಡ ಪಾವತಿಸಲಾಗಿತ್ತು. ಇದಕ್ಕೆ ಯಾವುದೇ ಅನುಮತಿ ಪಡೆದಿರಲಿಲ್ಲ.
‘ಹಣ ಪಾವತಿ ವೇಳೆ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ’ (ಎಫ್‌ಇಎಂಎ) ನಿಯಮಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಇ.ಡಿ ತನಿಖೆ ನಡೆಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.