ನವದೆಹಲಿ(ಪಿಟಿಐ): ಸುಪ್ರೀಂ ಕೋರ್ಟ್‌ನಲ್ಲಿ ವಕಾಲತ್ತು ವಹಿಸುವ ವಕೀಲರ ಸಂಘವು (ಎಸ್‌ಸಿಎಒಆರ್‌ಎ) ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದ ಬೆನ್ನಲ್ಲೇ, ಪ್ರಕರಣವೊಂದರಲ್ಲಿ ಕಾನೂನು ಸಲಹೆ ನೀಡಿದ್ದರು ಎನ್ನಲಾದ ಹಿರಿಯ ವಕೀಲರೊಬ್ಬರಿಗೆ ನೀಡಿದ್ದ ಸಮನ್ಸ್ ಅನ್ನು ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ಹಿಂಪಡೆದಿದೆ.
‘ನಿಮಗೆ ನೀಡಿದ್ದ ಸಮನ್ಸ್ ಅನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಹಿಂಪಡೆಲಾಗಿದೆ’ ಎಂದು ಹಿರಿಯ ವಕೀಲ ಪ್ರತಾಪ ವೇಣುಗೋಪಾಲ್ ಅವರಿಗೆ ಇ.ಡಿ ತಿಳಿಸಿದೆ.
ಪ್ರತಾಪ ವೇಣುಗೋಪಾಲ್ ಅವರಿಗೆ ಇ.ಡಿ ಸಮನ್ಸ್ ನೀಡಿದ್ದರ ಕುರಿತು ಎಸ್‌ಸಿಎಒಆರ್‌ಎ ಅಧ್ಯಕ್ಷ ವಿಪಿನ್ ನಾಯರ್, ಸಿಜೆಐ ಬಿ.ಆರ್.ಗವಾಯಿ ಅವರಿಗೆ ಪತ್ರ ಬರೆದು, ಗಮನ ಸೆಳೆದಿದ್ದರು.
‘ಪ್ರತಾಪ ವೇಣುಗೋಪಾಲ್ ಅವರಿಗೆ ಇ.ಡಿ ಸಮನ್ಸ್ ನೀಡಿರುವುದು ಆತಂಕಕಾರಿ ಬೆಳವಣಿಗೆ. ಇದು, ವಕೀಲಿಕೆ ವೃತ್ತಿಯ ಸ್ವಾತಂತ್ರ್ಯ ಹಾಗೂ ವಕೀಲ–ಕಕ್ಷಿದಾರರ ನಡುವಿನ ಗೌಪ್ಯತೆ ತತ್ವದ ಮೇಲೆ ಇದು ಪರಿಣಾಮ ಬೀರಲಿದೆ’ ಎಂದು ನಾಯರ್ ಕಳವಳ ವ್ಯಕ್ತಪಡಿಸಿದ್ದರು.
ಪ್ರಕರಣ: ಮೆಸರ್ಸ್ ಕೇರ್ ಹೆಲ್ತ್ ಇನ್ಸುರನ್ಸ್ ಲಿಮಿಟೆಡ್‌ನ, ಉದ್ಯೋಗಿಗಳ ಷೇರು ಮಾಲೀಕತ್ವ ಯೋಜನೆ (ಇಎಸ್‌ಒಪಿ) ಜತೆ ನಂಟಿನ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ ಇ.ಡಿ ತನಿಖೆ ನಡೆಸುತ್ತಿದೆ.
ಕಾನೂನು ಸಲಹೆ ನೀಡಿದ್ದಕ್ಕಾಗಿ ಹಿರಿಯ ವಕೀಲ ಅರವಿಂದ ದಾತಾರ್ ಅವರಿಗೆ ಕಂಪನಿಯು ಇಎಸ್‌ಒಪಿ ಪ್ರಯೋಜನ ನೀಡಿತ್ತು ಎನ್ನಲಾಗಿದೆ. ಇದಕ್ಕಾಗಿ ದಾತಾರ್ ಅವರಿಗೆ ಇ.ಡಿ ಸಮನ್ಸ್ ನೀಡಿತ್ತು.
ಇನ್ನೊಂದೆಡೆ, ಇಎಸ್‌ಒಪಿ ಅಡಿ ರೆಲಿಗೇರ್ ಎಂಟರ್‌ಪ್ರೈಸಸ್‌ನ ಮಾಜಿ ಅಧ್ಯಕ್ಷೆ ರಶ್ಮಿ ಸಲುಜಾ ಅವರಿಗೂ ಕಂಪನಿಯ ಷೇರುಗಳನ್ನು ಹಂಚಿಕೆ ಮಾಡುವುದಕ್ಕೆ ಹಿರಿಯ ವಕೀಲ ಪ್ರತಾಪ ವೇಣುಗೋಪಾಲ್ ಬೆಂಬಲಿಸಿದ್ದರು ಎನ್ನಲಾಗಿದೆ. ಈ ಕಾರಣಕ್ಕೆ, ಜೂನ್ 24ರಂದು ವಿಚಾರಣೆಗೆ ಹಾಜರಾಗುವಂತೆ ವೇಣುಗೋಪಾಲ್ ಅವರಿಗೆ ಇ.ಡಿ ಜೂನ್ 19ರಂದು ಸಮನ್ಸ್ ನೀಡಿದೆ ಎಂದು ಸಿಜೆಐ ಅವರಿಗೆ ಬರೆದ ಪತ್ರದಲ್ಲಿ ನಾಯರ್ ವಿವರಿಸಿದ್ದಾರೆ.
ದಾತಾರ್ ಅವರಿಗೆ ನೀಡಿರುವ ಸಮನ್ಸ್ ಹಿಂಪಡೆದಿಲ್ಲ. ಆದರೆ, ಅವರಿಗೆ ಹೊಸದಾಗಿ ಯಾವುದೇ ಸಮನ್ಸ್ ನೀಡಿಲ್ಲ ಎಂದು ಇ.ಡಿ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.