ADVERTISEMENT

ಪೆಗಾಸಸ್‌ ತನಿಖೆಗೆ ವಿಶೇಷ ತನಿಖಾ ತಂಡ; ‘ಸುಪ್ರೀಂ‘ಗೆ ಸಂಪಾದಕರ ಮಂಡಳಿ ಅರ್ಜಿ

ಪಿಟಿಐ
Published 3 ಆಗಸ್ಟ್ 2021, 12:00 IST
Last Updated 3 ಆಗಸ್ಟ್ 2021, 12:00 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಪೆಗಾಸಸ್ ಗೂಢಚರ್ಯೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಬೇಕು ಎಂದು ಕೋರಿ ಭಾರತೀಯ ಸಂಪಾದಕರ ಮಂಡಳಿಯು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಇಸ್ರೇಲ್‌ನ ಸಂಸ್ಥೆ ಎನ್‌ಎಸ್‌ಒದ ಪೆಗಾಸಸ್‌ ತಂತ್ರಾಂಶವನ್ನು ಬಳಸಿ ಆಯ್ದ ಪತ್ರಕರ್ತರು ಮತ್ತು ಇತರರ ಚಲನವಲನವನ್ನು ಕೇಂದ್ರ ಸರ್ಕಾರ ಗಮನಿಸಿದೆ ಎಂಬ ಆರೋಪಗಳಿವೆ.

ಜನರಿಗೆ ಮಾಹಿತಿ ಒದಗಿಸುವ, ವಿಶ್ವಾಸಾರ್ಹತೆ ಮತ್ತು ಸರ್ಕಾರ ಮುಕ್ತ, ಪಾರದರ್ಶಕವಾಗಿರಬೇಕು ಎಂಬ ಜನರ ಹಕ್ಕು ಸಾಕಾರಗೊಳಿಸುವ ಕಾರ್ಯವನ್ನು ಪತ್ರಕರ್ತರು ನಿಭಾಯಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ADVERTISEMENT

ಉತ್ತರಾದಾಯಿತ್ವವುಳ್ಳ ಸರ್ಕಾರದ ಎಲ್ಲ ಇಲಾಖೆಗಳಿಂದ ಮಾಹಿತಿ, ವಿವರಣೆಯನ್ನು ಪಡೆಯುವ, ಸರ್ಕಾರದ ಕಾರ್ಯಕ್ರಮಗಳಿಗೆ ಸಾಂವಿಧಾನಿಕ ಸಮರ್ಥನೆಯ ಪಡೆಯುವ ಹೊಣೆ ಪತ್ರಕರ್ತರದ್ದಾಗಿದೆ ಎಂದೂ ಹೇಳಲಾಗಿದೆ.

ಪತ್ರಕರ್ತರ ಈ ಹೊಣೆಗಾರಿಕೆ ನಿಭಾಯಿಸಲು ಮಾಧ್ಯಮ ಸ್ವಾತಂತ್ರ್ಯದ ರಕ್ಷಣೆಯೂ ಅತ್ಯಗತ್ಯ ಎಂದು ಮಂಡಳಿಯು ಅರ್ಜಿಯಲ್ಲಿ ಪ್ರತಿಪಾದಿಸಿದೆ. ಪತ್ರಕರ್ತ ಮೃಣಾಲ್‌ ಪಾಂಡೆ ಅವರು ಸಹ ಅರ್ಜಿದಾರರಾಗಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ಪೀಠವು ಆಗಸ್ಟ್‌ 5ರಂದು ಇದಕ್ಕೆ ಸಂಬಂಧಿತ ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಳ್ಳಲಿದೆ. ಹಿರಿಯ ಪತ್ರಕರ್ತರಾದ ಎನ್‌.ರಾಮ್‌, ಶಶಿಕುಮಾರ್ ಅವರೂ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದು, ಹಾಲಿ ಅಥವಾ ವಿಶ್ರಾಂತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ತನಿಖೆಗೆ ಒತ್ತಾಯಿಸಿದ್ದಾರೆ.

ಎನ್‌ಎಸ್‌ಒದ ಪೆಗಾಸಸ್‌ ತಂತ್ರಾಂಶ ಬಳಸಿ ಗೂಢಚರ್ಯೆ ಮಾಡುವ ಪಟ್ಟಿಯಲ್ಲಿ ಭಾರತದ ಸುಮಾರು 300 ಮೊಬೈಲ್‌ ಸಂಖ್ಯೆಗಳಿವೆ ಎಂದು ಅಂತರರಾಷ್ಟ್ರೀಯ ಮಾಧ್ಯಮ ಒಕ್ಕೂಟ ಈಚೆಗೆ ವರದಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.