ADVERTISEMENT

ಮಾತೃಭಾಷೆಯಲ್ಲಿ ಶಿಕ್ಷಣ: ವಿದ್ಯಾರ್ಥಿಗಳ ತರ್ಕ ಸಾಮರ್ಥ್ಯ ಹೆಚ್ಚಲಿದೆ –ಅಮಿತ್‌ ಶಾ

ಪಿಟಿಐ
Published 24 ಡಿಸೆಂಬರ್ 2022, 13:53 IST
Last Updated 24 ಡಿಸೆಂಬರ್ 2022, 13:53 IST
ಅಮಿತ್‌ ಶಾ
ಅಮಿತ್‌ ಶಾ   

ಮೆಹೆಸಾನಾ, ಗುಜರಾತ್‌ (ಪಿಟಿಐ): ‘ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡುವ ಅನುಕೂಲವನ್ನು ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಮೂಲಕ ವಿದ್ಯಾರ್ಥಿಗಳಿಗೆ ಮಾಡಿಕೊಡಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಯ ಯೋಚನೆ, ತರ್ಕ, ವಿಶ್ಲೇಷಣೆ ಮತ್ತು ಸಂಶೋಧನಾ ಸಾಮರ್ಥ್ಯ ಹೆಚ್ಚಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಭಿಪ್ರಾಯಪಟ್ಟರು.

ಇಲ್ಲಿನ ವಿಜಪುರದ ಶೇಠ್‌ ಜಿ.ಸಿ ಪ್ರೌಢಶಾಲೆಯ 95ನೇ ವರ್ಷಾಚರಣೆಯಲ್ಲಿ ಶನಿವಾರ ಭಾಗವಹಿಸಿ ಮಾತನಾಡಿದ ಅವರು, ‘ತಾಂತ್ರಿಕ, ವೈದ್ಯಕೀಯ ಮತ್ತು ಉನ್ನತ ಶಿಕ್ಷಣ ಕೋರ್ಸ್‌ಗಳ ಪಠ್ಯಗಳನ್ನು ಪ್ರಾದೇಶಿಕ ಭಾಷೆಗಳಿಗೆ ತರ್ಜುಮೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಎನ್‌ಇಪಿಯಿಂದಾಗಿ ಮುಂದಿನ 25 ವರ್ಷಗಳಲ್ಲಿ ಭಾರತವು ಜಗತ್ತಿನ ನಂಬರ್‌ ಒನ್‌ ದೇಶವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬ್ರಿಟಿಷರ ಕಾಲದ ಶಿಕ್ಷಣ ಪದ್ಧತಿಯಲ್ಲಿ ಉರುಹೊಡೆಯುವುದೇ ಬುದ್ಧಿವಂತಿಕೆಯ ಸಂಕೇತವಾಗಿತ್ತು. ಯೋಚಿಸುವ, ಸಂಶೋಧನೆ, ತರ್ಕ, ವಿಶ್ಲೇಷಣೆ, ನಿರ್ಧಾರ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ವಿದ್ಯಾರ್ಥಿಗಳಲ್ಲಿ ಇರಲಿಲ್ಲ’ ಎಂದರು.

ADVERTISEMENT

‘ಮುಂದಿನ ಎರಡು, ಐದು, ಏಳು ವರ್ಷಗಳಲ್ಲಿ ದೇಶದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯುವುದು ಸಾಧ್ಯವಾಗಲಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.