ADVERTISEMENT

‘ಎಪಿಕ್‌’ ಚರ್ಚೆಗೆ ಬಿಗಿಪಟ್ಟು: ರಾಜ್ಯಸಭೆ ಕಲಾಪದಿಂದ ಹೊರನಡೆದ ವಿಪಕ್ಷ ಸದಸ್ಯರು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2025, 23:22 IST
Last Updated 17 ಮಾರ್ಚ್ 2025, 23:22 IST
ಜಗದೀಪ್‌ ಧನಕರ್
ಜಗದೀಪ್‌ ಧನಕರ್   

ನವದೆಹಲಿ: ಮತದಾರರ ಗುರುತಿನ ಚೀಟಿಗಳು ಒಂದೇ ರೀತಿಯ ‘ಎಪಿಕ್’ ಸಂಖ್ಯೆಗಳನ್ನು ಹೊಂದಿರುವ ವಿಷಯದ ಕುರಿತು ಕೂಡಲೇ ಚರ್ಚೆಯಾಗಬೇಕು ಎಂದು ಒತ್ತಾಯಿಸಿದ ವಿರೋಧ ಪಕ್ಷಗಳ ಸದಸ್ಯರು ಸೋಮವಾರ ರಾಜ್ಯಸಭೆ ಕಲಾಪದಿಂದ ಹೊರನಡೆದರು.

ವಿವಿಧ ವಿಷಯಗಳ ಕುರಿತು ಚರ್ಚಿಸಲು ಅನುಮತಿ ಕೋರಿ ಸಲ್ಲಿಸಲಾದ 16 ನೋಟಿಸ್‌ಗಳನ್ನು ತಿರಸ್ಕರಿಸಲಾಗಿದೆ ಎಂದು ಉಪ ಸಭಾಪತಿ ಹರಿವಂಶ್‌ ಅವರು ಪ್ರಕಟಿಸಿದ ಬೆನ್ನಲ್ಲೇ, ಕಾಂಗ್ರೆಸ್‌ ಮತ್ತು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸದಸ್ಯರು ‘ಎಪಿಕ್‌’ ಕುರಿತು ಚರ್ಚೆಗೆ ಒತ್ತಾಯಿಸಿದರು. ಎಸ್‌ಪಿ, ಡಿಎಂಕೆ, ಆರ್‌ಜೆಡಿ, ಸಿಪಿಎಂ, ಸಿಪಿಐ ಮತ್ತು ಇತರ ವಿ‍ಪಕ್ಷಗಳ ಸದಸ್ಯರು ಇದಕ್ಕೆ ದನಿಗೂಡಿಸಿದರು.

ಟಿಎಂಸಿಯ ಸುಖೇಂದು ಶೇಖರ್‌ ರಾಯ್, ಮೌಸಮ್‌ ನೂರ್‌ ಮತ್ತು ಸುಷ್ಮಿತಾ ದೇವ್‌ ಹಾಗೂ ಕಾಂಗ್ರೆಸ್‌ನ ಪ್ರಮೋದ್‌ ತಿವಾರಿ ಅವರಿಂದ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಕುರಿತ ಚರ್ಚೆಗೆ ನೋಟಿಸ್‌ ಸ್ವೀಕರಿಸಲಾಗಿದೆ ಎಂದು ಹರಿವಂಶ್‌ ತಿಳಿಸಿದರು.

ADVERTISEMENT

ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡನೆ, ಇಲಾನ್‌ ಮಸ್ಕ್‌ ಒಡೆತನದ ಸ್ಟಾರ್‌ಲಿಂಕ್‌ ಕಂಪನಿಯ ಜತೆ ಭಾರ್ತಿ ಏರ್‌ಟೆಲ್‌ ಮತ್ತು ಜಿಯೊ ಕಂಪನಿಯ ಒಪ್ಪಂದ ಮತ್ತು ದೆಹಲಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ವಿಷಯಗಳ ಕುರಿತು ಚರ್ಚೆಗೂ ನೋಟಿಸ್‌ಗಳು ಬಂದಿವೆ ಎಂದರು.

‘ಎಪಿಕ್’ ವಿಷಯದ ಕುರಿತು ಮಾತನಾಡಲು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಕಾಶ ನೀಡಬೇಕೆಂದು ಕೆಲವು ಸಂಸದರು ಒತ್ತಾಯಿಸಿದರು. ನೋಟಿಸ್ ತಿರಸ್ಕರಿಸಲ್ಪಟ್ಟ ವಿಷಯವನ್ನು ಪ್ರಸ್ತಾಪಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಉಪ ಸಭಾಪತಿ ಹೇಳಿದರು.

ಇದರಿಂದ ಖರ್ಗೆ ಅವರು ಸಭಾತ್ಯಾಗ ಮಾಡಿದರು. ಅವರೊಂದಿಗೆ ವಿಪಕ್ಷಗಳ ಇತರ ಸದಸ್ಯರೂ ಸದನದಿಂದ ಹೊರನಡೆದರು. ವಿರೋಧ ಪಕ್ಷದ ಸದಸ್ಯರು ‘ಎಪಿಕ್’ ಕುರಿತು ಚರ್ಚೆಗೆ ಲೋಕಸಭೆಯಲ್ಲೂ ನೋಟಿಸ್‌ ನೀಡಿದ್ದರು. ಆದರೆ, ಅಲ್ಲೂ ನೋಟಿಸ್‌ಗಳನ್ನು ತಿರಸ್ಕರಿಸಲಾಯಿತು.

ಹೃದಯ ತುಂಬಿ ಬಂದಿದೆ: ಧನಕರ್

ಪಕ್ಷಭೇದ ಮರೆತು ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವುದನ್ನು ನೋಡಿ ಹೃದಯ ತುಂಬಿ ಬಂದಿದೆ ಎಂದು ರಾಜ್ಯಸಭಾ ಸಭಾಪತಿ ಜಗದೀಪ್‌ ಧನಕರ್‌ ಹೇಳಿದರು.

ಎದೆನೋವಿನ ಕಾರಣ ಧನಕರ್‌ ಅವರು ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆದಿದ್ದರು. ವೈದ್ಯರು ವಿಶ್ರಾಂತಿ ಸೂಚಿಸಿದ್ದರಿಂದ ಒಂದು ವಾರ ಕಲಾಪದಿಂದ ದೂರವುಳಿದಿದ್ದ ಅವರು ಸೋಮವಾರ ಸದನಕ್ಕೆ ಬಂದರು. ಕಲಾಪದ ಆರಂಭದಲ್ಲಿ ಆಡಳಿತ ಪಕ್ಷದ ನಾಯಕ ಜೆ.ಪಿ.ನಡ್ಡಾ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅನಾರೋಗ್ಯದಿಂದ ಶೀಘ್ರ ಚೇತರಿಸಿಕೊಂಡದ್ದಕ್ಕೆ ಸಂತಸ ವ್ಯಕ್ತಪಡಿಸಿದರಲ್ಲದೆ ಧನಕರ್‌ ಅವರ ದೀರ್ಘಾಯುಷ್ಯಕ್ಕಾಗಿ ಹಾರೈಸಿದರು.

‘ಎಲ್ಲರೂ ಪಕ್ಷಭೇದ ಮರೆತು ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಇಂತಹ ಪರಿಸ್ಥಿತಿ ಬಂದಾಗ ನಮ್ಮ ಹೃದಯಗಳು ಪರಸ್ಪರ ಬೆಸೆದುಕೊಳ್ಳುತ್ತವೆ ಎಂಬ ಅರಿವು ಕೂಡಾ ನನ್ನಲ್ಲಿ ಮೂಡಿದೆ’ ಎಂದು ಈ ವೇಳೆ ಸಭಾಪತಿ ಹೇಳಿದರು.

ಟಿಎಂಸಿಯ ಡೆರಿಕ್‌ ಒಬ್ರಯಾನ್‌ ಅವರೊಂದಿಗಿನ ಮಾತುಕತೆಯನ್ನು ನೆನಪಿಸಿಕೊಂಡ ಧನಕರ್ ‘ಹುಟ್ಟುಹಬ್ಬದ ಶುಭಾಶಯ ಕೋರಲು ಕಳೆದ ವಾರ ಒಬ್ರಯಾನ್‌ಗೆ ಕರೆ ಮಾಡಿದ್ದೆ. ಆಗ ಅವರು ತಮ್ಮ ಎಂದಿನ ಮಾತಿನ ಶೈಲಿಯಲ್ಲಿ ‘ಶಟ್‌ ಅಪ್ ನೀವು ವಿಶ್ರಾಂತಿ ತೆಗೆದುಕೊಳ್ಳಿ’ ಎಂದು ಉತ್ತರಿಸಿದರು’ ಎನ್ನುತ್ತಾ ನಗು ಬೀರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.