ಅರವಿಂದ ಕೇಜ್ರಿವಾಲ್
– ಪಿಟಿಐ ಚಿತ್ರ
ನವದೆಹಲಿ: ಯಮುನಾ ನದಿಗೆ ಹರಿಯಾಣ ಸರ್ಕಾರ ವಿಷ ಬೆರೆಸುತ್ತಿದೆ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಮಾಡಿರುವ ಆರೋಪವು ಜನರ ಮನಸಿನಲ್ಲಿ ‘ಶಾಶ್ವತ ಗಾಯ’ವನ್ನುಂಟು ಮಾಡಬಹುದು ಎಂದು ಚುನಾವಣಾ ಆಯೋಗ (ಇಸಿ) ಗುರುವಾರ ಹೇಳಿದೆ. ಈ ಆರೋಪದ ಬಗ್ಗೆ ಸೂಕ್ತ ವಿವರಣೆ ನೀಡಲು ಕೇಜ್ರಿವಾಲ್ ಅವರಿಗೆ ಮತ್ತೊಂದು ನೋಟಿಸ್ ನೀಡಿದೆ.
ಬಿಜೆಪಿ ಆಡಳಿತವಿರುವ ಹರಿಯಾಣ ರಾಜ್ಯದಿಂದ ಇತ್ತೀಚಿನ ದಿನಗಳಲ್ಲಿ ಪಡೆದ ನೀರು ಅತ್ಯಂತ ವಿಷಕಾರಿಯಾಗಿದ್ದು, ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ಕೇಜ್ರಿವಾಲ್ ಅವರು ಇಸಿಯ ಮೊದಲ ನೋಟಿಸ್‌ಗೆ ನೀಡಿರುವ 14 ಪುಟಗಳ ಉತ್ತರದಲ್ಲಿ ಪ್ರತಿಕ್ರಿಯಿಸಿದ ಮರು ದಿನವೇ ಇಸಿ ಈ ರೀತಿ ಹೇಳಿದೆ.
ಇಸಿಯ ಈ ನಡೆಗೆ ಕಿಡಿಕಾರಿರುವ ಕೇಜ್ರಿವಾಲ್, ‘ಇಸಿ ಮುಖ್ಯಸ್ಥ ರಾಜೀವ್‌ಕುಮಾರ್ ಅವರು ರಾಜಕೀಯ ಆಟ ಆಡುತ್ತಿದ್ದಾರೆ. ಅವರು ಇಸಿಯ ವಿಶ್ವಾಸಾರ್ಹತೆಯನ್ನು ನಾಶಪಡಿಸುತ್ತಿದ್ದಾರೆ. ಅಲ್ಲದೆ, ನಿವೃತ್ತಿಯ ನಂತರ ಅಧಿಕಾರ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ’ ಎಂದು ಆರೋಪಿಸಿದರು.
ಇಸಿಯಿಂದ ಎರಡನೇ ನೋಟಿಸ್ ಬರುತ್ತಿದ್ದಂತೆ ಕೇಜ್ರಿವಾಲ್, ‘ಎಎಪಿಯ ಪ್ರತಿಸ್ಪರ್ಧಿ ಅಭ್ಯರ್ಥಿಗಳ ಹಣ ಹಂಚಿಕೆ ಮತ್ತು ಇನ್ನಿತರ ಉಡುಗೊರೆಗಳಿಗೆ ಮತದಾರರರು ಮಾರುಹೋಗುವುದು ಕಾಣಿಸುತ್ತಿಲ್ಲ. ಹಾಗಾಗಿ, ಇಸಿ ಇಂತಹ ರಾಜಕೀಯ ಆಟ ಆಡುತ್ತಿದೆ’ ಎಂದು ಆರೋಪಿಸಿದರು.
ಕೇಜ್ರಿವಾಲ್ ಅವರು ನೋಟಿಸ್‌ಗೆ ನೀಡಿರುವ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಇಸಿ, ‘ನದಿ ನೀರು ವಿಷಮಯವಾಗುತ್ತಿರುವುದು ಮತ್ತು ಹೆಚ್ಚುತ್ತಿರುವ ಅಮೋನಿಯಾ ಬಳಕೆ ಚಾಲ್ತಿಯಲ್ಲಿರುವ, ದೀರ್ಘಕಾಲದ ಹಾಗೂ ಕಾನೂನಾತ್ಮಕವಾದ ಆಡಳಿತ ಸಮಸ್ಯೆಯಾಗಿದೆ. ಇದನ್ನು ಬೆರೆಸುವುದು ಸರಿಯಲ್ಲ’ ಎಂದು ಕೇಜ್ರಿವಾಲ್ ಅವರಿಗೆ ಹೇಳಿದೆ.
ಅಲ್ಲದೆ, ಕೇಜ್ರಿವಾಲ್ ಮಾಡಿರುವ ಆರೋಪಗಳು ಜನರ ನಡುವೆ ದ್ವೇಷವನ್ನು ಪ್ರಚೋದಿಸುತ್ತವೆ. ಸಾರ್ವಜನಿಕ ಶಾಂತಿಗೂ ಭಂಗ ತರಲಿವೆ. ತಮ್ಮ ಆರೋಪಗಳಿಗೆ ಸಂಬಂಧಿಸಿ ಸೂಕ್ತ ಸಾಕ್ಷ್ಯ ಮತ್ತು ವಿವರಣೆಯನ್ನು ಅವರು ನೀಡಬೇಕೆಂದು ಇಸಿ ಎರಡನೇ ನೋಟಿಸ್‌ನಲ್ಲಿ ತಾಕೀತು ಮಾಡಿದೆ.
ಕೇಜ್ರಿವಾಲ್ ಅವರು ತಾವು ಮಾಡಿರುವ ಆರೋಪಕ್ಕೆ ಸಂಬಂಧಿಸಿ, ಶುಕ್ರವಾರ ಬೆಳಿಗ್ಗೆ 11 ಗಂಟೆಯೊಳಗೆ, ಹರಿಯಾಣ ಸರ್ಕಾರ ಯಮುನಾ ನದಿ ನೀರಿಗೆ ಯಾವ ರೀತಿಯ ವಿಷ ಬೆರೆಸಿದೆ, ಯಾವ ಎಂಜಿನಿಯರ್‌ಗಳು ಯಾವ ಸ್ಥಳದಲ್ಲಿ ಅದನ್ನು ಪತ್ತೆ ಹಚ್ಚಿದ್ದಾರೆ ಎನ್ನುವ ಸಂಗತಿಗಳ ಬಗ್ಗೆ ವಿವರಣೆ ಮತ್ತು ಸಾಕ್ಷ್ಯಗಳನ್ನು ಒದಗಿಸಬೇಕು. ಇದಕ್ಕೆ ತಪ್ಪಿದರೆ ಅವರ ವಿರುದ್ಧ ಆಯೋಗವು ಸೂಕ್ತ ಕ್ರಮ ತೆಗೆದುಕೊಳ್ಳಲು ಮುಕ್ತವಾಗಿರುತ್ತದೆ ಎಂದು ನೋಟಿಸ್‌ನಲ್ಲಿ ಎಚ್ಚರಿಸಿದೆ.
ಏತನ್ಮಧ್ಯೆ ಕೇಜ್ರಿವಾಲ್ ಅವರ ಹೇಳಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಕಿಡಿಕಾರಿದ್ದಾರೆ.
ನಾನು ಜೀವಂತವಾಗಿರುವವರೆಗೂ ದೆಹಲಿಯ ಜನರು ವಿಷಕಾರಿ ನೀರು ಕುಡಿಯಲು ಬಿಡುವುದಿಲ್ಲ. ನನ್ನನ್ನು 2 ದಿನಗಳಲ್ಲಿ ಬಂಧಿಸುತ್ತಾರೆಂಬುದು ಗೊತ್ತು. ಆದರೆ ನಾನು ಹೆದರಲ್ಲಅರವಿಂದ ಕೇಜ್ರಿವಾಲ್ ಎಎಪಿ ಮುಖ್ಯಸ್ಥ
ಯಮುನೆ ಮಾಲಿನ್ಯ ವಿಚಾರದಲ್ಲಿ ಎಎಪಿಯ ದೂಷಣೆಯು ದೆಹಲಿ ಸರ್ಕಾರದ ಅಸಮರ್ಥತೆಯನ್ನು ಬಹಿರಂಗಪಡಿಸಿದೆ. ಕೇಜ್ರಿವಾಲ್ ಹರಿಯಾಣದ ಜನರ ಕ್ಷಮೆ ಕೇಳಲಿಜೆ.ಪಿ. ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
ಯಮುನೆ ಮಲೀನಕ್ಕೆ ಅವಕಾಶ ಮಾಡಿಕೊಟ್ಟಿದ್ದು ಕೇಜ್ರಿವಾಲ್ ಮತ್ತು ದೆಹಲಿಯ ಜನರು ವಿಷಯುಕ್ತ ನೀರು ಕುಡಿಯುವಂತೆ ಮಾಡಿದ್ದೂ ಅವರೇಅಮಿತ್ ಶಾ ಕೇಂದ್ರ ಗೃಹ ಸಚಿವ
ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ‘ಅತಿ ಹೆಚ್ಚು ಅಮೋನಿಯಾ ಇರುವ ಮತ್ತು ಕ್ಲೋರಿನ್‌ನಿಂದ ಸಂಸ್ಕರಿಸಿರುವ ಈ ನೀರನ್ನು ಬಾಟಲಿಯಲ್ಲಿ ತುಂಬಿ ಗೃಹ ಸಚಿವ ಅಮಿತ್ ಶಾ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಶೈನಿ ದೆಹಲಿ ಬಿಜೆಪಿ ಘಟಕದ ಮುಖ್ಯಸ್ಥ ಸಚ್‌ದೇವ್ ಹಾಗೂ ರಾಹುಲ್ ಗಾಂಧಿ ಅವರಿಗೆ ಕಳುಹಿಸುತ್ತೇವೆ. ಇವರೆಲ್ಲರೂ ಸಾರ್ವಜನಿಕರ ಎದುರು ಈ ನೀರನ್ನು ಕುಡಿಯುವ ಧೈರ್ಯ ಮಾಡಲಿ’ ಎಂದು ಸವಾಲು ಹಾಕಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಯಮುನೆಯಲ್ಲಿ ಅಮೋನಿಯಾ ಮಟ್ಟವು 7 ಪಿಪಿಎಂ ತಲುಪಿತ್ತು. ಈ ಬಗ್ಗೆ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಆತಿಶಿಯವರು ಹರಿಯಾಣ ಮುಖ್ಯಮಂತ್ರಿಗೆ ಪದೇ ಪದೇ ಮನವಿ ಮಾಡಿದ್ದರು. ಅಲ್ಲದೆ ಎಎಪಿ ನಾಯಕರು ಸಾರ್ವಜನಿಕವಾಗಿ ದನಿಎತ್ತಿದ್ದರು. ಆ ನಂತರ ಅಮೋನಿಯಾ ಮಟ್ಟವು 3ಪಿಪಿಎಂಗೆ ಇಳಿದಿದೆ’ ಎಂದು ಹೇಳಿದರು. ‘ನೀರಿನಲ್ಲಿ ಅಮೋನಿಯಾ ಮಟ್ಟ 1ಪಿಪಿಎಂ ದಾಟಿದರೆ ನಾವು ನೀರಿನ ಸಂಸ್ಕರಣಾ ಘಟಕಗಳನ್ನು ಮುಚ್ಚಬೇಕಾಗುತ್ತದೆ. ನೀರು ಸಂಸ್ಕರಿಸಲು ಅತೀ ಹೆಚ್ಚಿನ ಮಟ್ಟದಲ್ಲಿ ಅಮೋನಿಯಾ ಮತ್ತು ಕ್ಲೋರಿನ್ ಬೆರೆಸುವುದು ಹಾನಿಕಾರಕ. ಆರಂಭದಲ್ಲಿ ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದ ಹರಿಯಾಣ ಮುಖ್ಯಮಂತ್ರಿಯವರು ಆ ನಂತರ ಸ್ಪಂದಿಸಿಲ್ಲ’ ಎಂದು ಕೇಜ್ರಿವಾಲ್ ದೂರಿದರು.
ನವದೆಹಲಿ (ಪಿಟಿಐ): ಚುನಾವಣಾ ಆಯೋಗದ (ಇಸಿ) ಅಧಿಕಾರಿಗಳ ತಂಡವು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರ ನಿವಾಸ ‘ಕಪುರ್ಥಾಲಾ ಹೌಸ್’ನಲ್ಲಿ ಶೋಧ ನಡೆಸಲು ಹೋಗಿದೆ ಎಂದು ಆಮ್ ಆದ್ಮಿ ಪಕ್ಷ ಗುರುವಾರ ಆರೋಪಿಸಿದೆ. ಮುಖ್ಯಮಂತ್ರಿ ಮಾನ್ ಅವರ ನಿವಾಸದ ಆವರಣದಲ್ಲಿ ಇ.ಸಿ ಅಧಿಕಾರಿಗಳು ಶೋಧದಲ್ಲಿ ತೊಡಗಿದ್ದಾರೆ ಎಂದು ಅದು ಆರೋಪಿಸಿದೆ. ‘ಪಂಜಾಬ್ ಸರ್ಕಾರ’ದ ಸ್ಟಿಕ್ಕರ್ ಮತ್ತು ರಾಜ್ಯದ ನೋಂದಣಿಯ ಖಾಸಗಿ ವಾಹನವನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಪಂಜಾಬ್ ಭವನದ ಬಳಿ ನಿಲ್ಲಿಸಲಾಗಿದ್ದ ವಾಹನದಲ್ಲಿ ಎಎಪಿಗೆ ಸೇರಿದ್ದು ಎನ್ನಲಾದ ಮದ್ಯ ನಗದು ಮತ್ತು ಚುನಾವಣಾ ಪ್ರಚಾರದ ಸಾಮಗ್ರಿಗಳು ಪತ್ತೆಯಾದ ನಂತರ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನವದೆಹಲಿ (ಪಿಟಿಐ): ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರ ನಿವಾಸದ ಎದುರು ಕಸ ಸುರಿದು ಪ್ರತಿಭಟಿಸಿದ ಎಎಪಿ ಬಂಡಾಯ ನಾಯಕಿ ಹಾಗೂ ರಾಜ್ಯಸಭೆ ಸದಸ್ಯೆ ಸ್ವಾತಿ ಮಾಲಿವಾಲ್ ಅವರನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ. ಮಾಲಿವಾಲ್ ಮತ್ತು ಅವರ ಬೆಂಬಲಿಗರು ವಿಕಾಸ್‌ಪುರಿಯ ರಸ್ತೆಗಳಿಂದ ಕಸ ಸಂಗ್ರಹಿಸಿ ಅದನ್ನು ಮೂರು ಮಿನಿ ಟ್ರಕ್‌ಗಳಲ್ಲಿ ತುಂಬಿಕೊಂಡು ಫಿರೋಜ್‌ಶಾ ರಸ್ತೆಯಲ್ಲಿರುವ ಕೇಜ್ರಿವಾಲ್ ಅವರ ನಿವಾಸದ ಎದುರು ಸುರಿದು ಪ್ರತಿಭಟಿಸಿದರು. ಆಗ ಮಹಿಳಾ ಪೊಲೀಸರು ಸ್ವಾತಿ ಮಾಲಿವಾಲ್ ಮತ್ತು ಅವರ ಬೆಂಬಲಿಗರನ್ನು ವಶಕ್ಕೆ ಪಡೆದರು. ‘ಇಡೀ ದೆಹಲಿಯ ಸ್ಥಿತಿ ಹದಗೆಟ್ಟಿದೆ. ದೆಹಲಿಯು ಪ್ರತಿದಿನ ಎದುರಿಸುತ್ತಿರುವ ಕಸ ಮತ್ತು ವಾಸನೆಯನ್ನು ಇಂದು ಕೇಜ್ರಿವಾಲ್ ಅವರು ಎದುರಿಸಲಿದ್ದಾರೆ’ ಎಂದು ಮಾಲಿವಾಲ್ ಅವರು ಕಸ ಸುರಿಯುವುದಕ್ಕೂ ಮೊದಲು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.