ADVERTISEMENT

Elections 2022: ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಅಶ್ವಿನಿ ಕುಮಾರ್‌

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2022, 18:38 IST
Last Updated 15 ಫೆಬ್ರುವರಿ 2022, 18:38 IST
ಅಶ್ವಿನಿ ಕುಮಾರ್‌
ಅಶ್ವಿನಿ ಕುಮಾರ್‌   

ನವದೆಹಲಿ: ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಕೇಂದ್ರದ ಮಾಜಿ ಕಾನೂನು ಸಚಿವ ಅಶ್ವಿನಿ ಕುಮಾರ್ ಅವರು ಮಂಗಳವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. 46 ವರ್ಷಗಳ ಹಿಂದೆ ಕಾಂಗ್ರೆಸ್ ಸೇರಿದ್ದ ಅವರು ಪಂಜಾಬ್ ವಿಧಾನಸಭಾ ಚುನಾವಣೆಗೆ ಒಂದು ವಾರ ಬಾಕಿಯಿರುವಾಗ ಪಕ್ಷದ ತೊರೆದಿರುವುದು ಅಚ್ಚರಿ ಮೂಡಿಸಿದೆ.

2002ರಿಂದ 2016ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದ ಅವರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ತಮ್ಮ ರಾಜೀನಾಮೆಗೆ ಕಾರಣವನ್ನು ವಿವರಿಸಿದ್ದಾರೆ. ಮುಂದಿನ ನಡೆಯನ್ನು ತಿಳಿಸದ ಅವರು, ಯಾವ ಪಕ್ಷವನ್ನೂ ಸೇರುವುದಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ವಾಸ್ತವದೊಂದಿಗೆ ಸಂಪರ್ಕವನ್ನು ಕಳೆದುಕೊಂಡಿದ್ದು, ರಾಷ್ಟ್ರದ ಜನರ ಮನೋಭಾವವನ್ನು ಪ್ರತಿಬಿಂಬಿಸುತ್ತಿಲ್ಲ ಎಂದಿದ್ದಾರೆ. ‘ಸ್ಫೂರ್ತಿದಾಯಕ ನಾಯಕತ್ವದ ಕೊರತೆ, ಆಂತರಿಕ ವಿಚಾರಗಳ ನಿರ್ವಹಣೆ ಕೊರತೆಯಿಂದ ನೊಂದು ನನ್ನ ಹಾಗೂ ಕಾಂಗ್ರೆಸ್ ನಡುವಿನ 46 ವರ್ಷಗಳ ಬಾಂಧವ್ಯವನ್ನು ಕೊನೆಗೊಳಿಸುವ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಹಿಂದಿನ ಎರಡು ತಲೆಮಾರುಗಳು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವು’ ಎಂದು ಅವರು ಹೇಳಿದ್ದಾರೆ.

ADVERTISEMENT

ನೆಹರೂ–ಗಾಂಧಿ ಕುಟುಂಬದ ನಿಷ್ಠರಾಗಿದ್ದ, ಡಾ. ಮನಮೋಹನ್ ಸಿಂಗ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಅವರಿಗೆ ನಂತರದ ದಿನಗಳಲ್ಲಿ ಪಕ್ಷ ಹೆಚ್ಚಿನ ಜವಾಬ್ದಾರಿ ನೀಡಲಿಲ್ಲ. ಆದರೆ ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆಗೆ ಒತ್ತಾಯಿಸಿದ್ದ ಜಿ–23 ಸದಸ್ಯರ ವಿರುದ್ಧ ಅಶ್ವಿನಿ ದನಿ ಎತ್ತಿದ್ದರು. ಇತ್ತೀಚೆಗೆ, ರಾಜ್ಯಸಭೆಯ ಮುಖ್ಯ ಸಚೇತಕ ಜೈರಾಂ ರಮೇಶ್ ಅವರನ್ನು ಸುದ್ದಿ ಮಾಧ್ಯಮ ಹಾಗೂ ಟ್ವಿಟರ್‌ನಲ್ಲಿ ಟೀಕಿಸಿದ್ದರು. ಗುಲಾಂ ನಬಿ ಆಜಾದ್ ಅವರು ತಮಗೆ ಸಂದ ಪದ್ಮ ಪುರಸ್ಕಾರವನ್ನು ತಿರಸ್ಕರಿಸಬೇಕಿತ್ತು ಎಂಬ ರಮೇಶ್ ಮಾತಿಗೆ ಅಶ್ವಿನಿ ಆಕ್ಷೇಪವ್ಯಕ್ತಪಡಿಸಿದ್ದರು.

ಅಶ್ವಿನಿ ಅವರು ಪಂಜಾಬ್‌ನಲ್ಲಿ ಜನಪ್ರಿಯ ನಾಯಕರಲ್ಲದಿದ್ದರೂ, ಚುನಾವಣೆಗೆ ಕೆಲವೇ ದಿನಗಳಿರುವಾಗ ರಾಜೀನಾಮೆ ನೀಡಿರುವುದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. 2013ರಲ್ಲಿ ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಸಿಬಿಐ ಸ್ಥಿತಿಗತಿ ವರದಿಯನ್ನು ತಿರುಚಿದ್ದರು ಎಂಬ ಆರೋಪದ ಕಾರಣಕ್ಕೆ ಅವರು ಸಂಪುಟ ತೊರೆದಿದ್ದರು. ಆದರೂ, ಜಪಾನ್‌ಗೆ ಪ್ರಧಾನಮಂತ್ರಿಗಳ ಪ್ರತಿನಿಧಿಯಾಗಿ ನಿಯೋಜನೆಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.