ADVERTISEMENT

ದೆಹಲಿ| ಸಚಿವೆ ಅತಿಶಿ ಪತ್ರಿಕಾಗೋಷ್ಠಿ ಬೆನ್ನಿಗೇ ವಿದ್ಯುತ್ ಸಬ್ಸಿಡಿ ಕಡತಕ್ಕೆ ಸಹಿ

ಐಎಎನ್ಎಸ್
Published 14 ಏಪ್ರಿಲ್ 2023, 14:31 IST
Last Updated 14 ಏಪ್ರಿಲ್ 2023, 14:31 IST
ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿನಯ್‌ ಕುಮಾರ್ ಸಕ್ಸೇನಾ
ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿನಯ್‌ ಕುಮಾರ್ ಸಕ್ಸೇನಾ    

ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಶುಕ್ರವಾರ ವಿದ್ಯುತ್ ಸಬ್ಸಿಡಿಗೆ ಸಂಬಂಧಿಸಿದ ಕಡತಕ್ಕೆ ಅನುಮೋದನೆ ನೀಡಿದ್ದಾರೆ. ಇದರೊಂದಿಗೆ, ದೆಹಲಿಯ ನಾಗರಿಕರಿಗೆ ಮೊದಲಿನಂತೆ ಸಬ್ಸಿಡಿ ವಿದ್ಯುತ್ ಮುಂದುವರಿಯಲಿದೆ.

ಶುಕ್ರವಾರ ಮಧ್ಯಾಹ್ನ ದಿಢೀರ್‌ ಸುದ್ದಿಗೋಷ್ಠಿ ನಡೆಸಿದ್ದ ದೆಹಲಿ ಇಂಧನ ಖಾತೆ ಸಚಿವೆ ಅತಿಶಿ ಮರ್ಲೆನಾ ‘ದೆಹಲಿಯ 46 ಲಕ್ಷ ಕುಟುಂಬಗಳಿಗೆ ನೀಡಲಾಗುತ್ತಿದ್ದ ವಿದ್ಯುತ್ ಸಬ್ಸಿಡಿ ಇಂದಿಗೆ ಕೊನೆಗೊಳ್ಳಲಿದೆ. ನಾಳೆಯಿಂದ ವಿದ್ಯುತ್ ಬಿಲ್‌ಗೆ ಸಬ್ಸಿಡಿ ನೀಡುವುದಿಲ್ಲ. ಸಬ್ಸಿಡಿಯನ್ನು ನಿಲ್ಲಿಸಲಾಗಿದೆ. ಎಎಪಿ ಸರ್ಕಾರವು ಮುಂಬರುವ ವರ್ಷಕ್ಕೆ ಸಬ್ಸಿಡಿಯನ್ನು ಮುಂದುವರೆಸುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಆದರೆ, ಆ ನಿರ್ಧಾರಕ್ಕೆ ಸಂಬಂಧಿಸಿದ ಕಡತಕ್ಕೆ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ಅವರ ಅನುಮೋದನೆ ಬೇಕಾಗಿದೆ. ಆದರೆ ಅದು ಈ ವರೆಗೆ ಸಿಕ್ಕಿಲ್ಲ. ಹೀಗಾಗಿ ಸಬ್ಸಿಡಿ ಬಿಡುಗಡೆ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದ್ದರು.

ಇಂಧನ ಸಚಿವರು ಆರೋಪ ಮಾಡಿದ ಕೆಲವೇ ಗಂಟೆಗಳಲ್ಲಿ ಪ್ರತಿಕ್ರಿಯಿಸಿರುವ ಲೆಫ್ಟಿನೆಂಟ್ ಗವರ್ನರ್ ಕಚೇರಿ, ‘ವಿದ್ಯುತ್ ಸಬ್ಸಿಡಿಗೆ ಸಂಬಂಧಿಸಿದ ಕಡತಕ್ಕೆ ಸಹಿ ಆಗಿದೆ’ ಎಂದು ಹೇಳಿಕೊಂಡಿದೆ.

ADVERTISEMENT

ಅತಿಶಿ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಲೆಫ್ಟಿನೆಂಟ್ ಗವರ್ನರ್ ಕಚೇರಿ, ‘ಇಂಧನ ಸಚಿವರು ಅನಗತ್ಯ ಮತ್ತು ಆಧಾರರಹಿತ ಆರೋಪಗಳನ್ನು ಮಾಡುವುದನ್ನು ನಿಲ್ಲಿಸಬೇಕು’ ಎಂದು ಹೇಳಿದೆ.

'ಇಂಧನ ಸಚಿವರು ಸುಳ್ಳು ಹೇಳಿಕೆಗಳ ಮೂಲಕ ಜನರ ದಾರಿ ತಪ್ಪಿಸುವುದನ್ನು ನಿಲ್ಲಿಸಬೇಕು. ವಿದ್ಯುತ್ ಸಬ್ಸಿಡಿಗೆ ಏಪ್ರಿಲ್ 15ರ ಗಡುವು ಇದ್ದಾಗ ಏಪ್ರಿಲ್ 4 ರವರೆಗೆ ನಿರ್ಧಾರವನ್ನು ಕೈಗೊಂಡಿರಲಿಲ್ಲ ಎಂದು ಇಂಧನ ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಕೇಳಲಾಗಿದೆ’ ಎಂದು ಹೇಳಿದೆ.

ವಿದ್ಯುತ್‌ ಡಿಸ್ಕಮ್‌ಗಳಿಗೆ ನೀಡಲಾದ ₹13,549 ಕೋಟಿ ರೂಪಾಯಿಗಳ ಬಗ್ಗೆ ಲೆಕ್ಕಪರಿಶೋಧನೆ ನಡೆಸದ ರಾಜ್ಯ ಸರ್ಕಾರವನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಸಕ್ಸೇನಾ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.