ADVERTISEMENT

‘ಒಂದು ರಾಷ್ಟ್ರ, ಒಂದು ಪಿಂಚಣಿ’ ಯೋಜನೆ ಜಾರಿಗೆ ನೌಕರರ ಸಂಘಟನೆ ಆಗ್ರಹ

ಪಿಟಿಐ
Published 27 ಜನವರಿ 2022, 20:43 IST
Last Updated 27 ಜನವರಿ 2022, 20:43 IST

ನವದೆಹಲಿ: ಉದ್ಯೋಗಿಗಳ ಸಾಮಾಜಿಕ-ಆರ್ಥಿಕ ಭದ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ (ಎನ್‌ಪಿಎಸ್) ಬದಲಾವಣೆ ತರುವ ಮೂಲಕ'ಒಂದು ರಾಷ್ಟ್ರ, ಒಂದು ಪಿಂಚಣಿ' ಯೋಜನೆ ಜಾರಿಗೊಳಿಸಬೇಕು ಎಂದು ನೌಕರರ ಸಂಘಟನೆಯು ಕೇಂದ್ರವನ್ನು ಆಗ್ರಹಿಸಿದೆ.

14 ಲಕ್ಷಕ್ಕೂ ಹೆಚ್ಚು ಮಂದಿ ಇರುವ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರನ್ನು ಒಂದೇ ಪಿಂಚಣಿ ವ್ಯಾಪ್ತಿಗೆ ತರಬೇಕು ಎಂದು ಹಳೆಯ ಪಿಂಚಣಿ ಯೋಜನೆ ಆಂದೋಲನದ (ಎನ್‌ಎಂಓಪಿಎಸ್‌) ಮುಖಂಡರು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮ್ ಮತ್ತು ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

’ನೌಕರ ಪಡೆದ ಕೊನೆಯ ಮೂಲ ವೇತನದ ಅರ್ಧದಷ್ಟು ಹಣವನ್ನು ನಿವೃತ್ತಿಯ ನಂತರ ಪಿಂಚಣಿಯಾಗಿ ನೀಡುವ ಬಗ್ಗೆ ಎನ್‌ಪಿಎಸ್‌ನಲ್ಲಿ ಯಾವುದೇ ಖಾತರಿ ಇರುವುದಿಲ್ಲ’ ಎಂದು ಎನ್‌ಎಂಒಪಿಎಸ್ ದೆಹಲಿ ಘಟಕದ ಅಧ್ಯಕ್ಷ ಮಂಜೀತ್ ಸಿಂಗ್ ಪಟೇಲ್ ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

‘ನೂತನ ಪಿಂಚಣಿ ಯೋಜನೆಯಡಿ ನಿವೃತ್ತರು ₹500 ರಿಂದ ₹5,000 ಪಿಂಚಣಿ ಪಡೆಯುತ್ತಿದ್ದಾರೆ. ಹಳೆಯ ಪಿಂಚಣಿ ಯೋಜನೆಯಲ್ಲಿ ನಿವೃತ್ತಿ ನಂತರ ಕನಿಷ್ಠ ₹9,000 ಪಿಂಚಣಿ ಪಡೆಯಬಹುದು’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕೇಂದ್ರ ಸ್ವಾಯತ್ತ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ವಿವಿಧ ರೀತಿಯ ಉದ್ಯೋಗಿಗಳಿಗೆ 'ಒಂದು ರಾಷ್ಟ್ರ ಒಂದು ಪಡಿತರ ಚೀಟಿ' ಯೋಜನೆಯ ಮಾದರಿಯಲ್ಲಿ ಎನ್‌ಪಿಎಸ್ ವ್ಯವಸ್ಥೆಯನ್ನು ಸಾರ್ವತ್ರಿಕ ಪಿಂಚಣಿ ವೇದಿಕೆಯ ನ್ನಾಗಿ ಮಾಡಲು ಎನ್‌ಎಂಒಪಿಎಸ್ಒತ್ತಾಯಿಸಿದೆ.

’ನಮ್ಮ ಬೇಡಿಕೆಗಳಿಗೆ ಅನುಗುಣವಾಗಿ ಎನ್‌ಪಿಎಸ್ ಅನ್ನು ಮಾರ್ಪಡಿಸಬೇಕು ಮತ್ತು ಎಲ್ಲಾ ವರ್ಗದ ಉದ್ಯೋಗಿಗಳಿಗೆ ಒಂದೇ ಯೋಜನೆಯನ್ನು ಮಾಡಬೇಕು. 'ಒಂದು ರಾಷ್ಟ್ರ, ಒಂದು ಪಿಂಚಣಿ' ಯೋಜನೆ ಜಾರಿಗೊಳಿಸಬೇಕು’ ಎಂದು ಪಟೇಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.