ADVERTISEMENT

ಶೋಪಿಯಾನ್‌ ಎನ್‌ಕೌಂಟರ್‌: ಎಲ್‌ಇಟಿ ನಾಲ್ವರು ಉಗ್ರರ ಹತ್ಯೆ

ಕಾರ್ಯಾಚರಣೆಗೆ ತೆರಳುವಾಗ ಅಪಘಾತ: ಇಬ್ಬರು ಯೋಧರು ಸಾವು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2022, 15:44 IST
Last Updated 14 ಏಪ್ರಿಲ್ 2022, 15:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ ಗುರುವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್‌–ಎ–ತಯಬ(ಎಲ್‌ಇಟಿ) ನಾಲ್ವರು ಉಗ್ರರು ಹತರಾಗಿದ್ದು, ಕಾರ್ಯಾಚರಣೆಗೆ ತೆರಳುವಾಗ ಭದ್ರತಾ ಪಡೆಯ ವಾಹನ ಅಪಘಾತಕ್ಕೀಡಾಗಿ ಮೂವರು ಯೋಧರು ಮೃತಪಟ್ಟಿದ್ದಾರೆ.

‘ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಶೋಪಿಯಾನ್‌ನ ಝೈನ್‌ಪೋರಾ ಪ್ರದೇಶದಲ್ಲಿ ಬಡಿಗಾಮ್‌ ಎಂಬಲ್ಲಿ ಸುತ್ತುವರೆದ ಭದ್ರತಾಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಪಡೆಗಳ ಪ್ರತಿದಾಳಿಗೆ ನಾಲ್ವರು ಉಗ್ರರು ಹತರಾಗಿದ್ದಾರೆ. ಹತ್ಯೆಯಾದವರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆದಿದೆ’ ಎಂದು ಕಾಶ್ಮೀರ ವಲಯ ಐಜಿಪಿ ವಿಜಯಕುಮಾರ್‌ ಟ್ವೀಟ್‌ ಮಾಡಿದ್ದಾರೆ.

‘ಹತ್ಯೆಯಾದ ಈ ನಾಲ್ವರು ಉಗ್ರರು ಹೊರರಾಜ್ಯದ ಕಾರ್ಮಿಕರ ಮೇಲಿನ ದಾಳಿ, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್‌ ಭದ್ರತಾ ಸಿಬ್ಬಂದಿಯಿಂದ 12 ಬೋರ್‌ ರೈಫಲ್‌ಗಳನ್ನು ಕಸಿದು ಪರಾರಿಯಾದ ಪ್ರಕರಣ ಸೇರಿ ಆರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು’ ಎಂದು ಐಜಿಪಿ ವಿಜಯಕುಮಾರ್‌ ತಿಳಿಸಿದರು.

ADVERTISEMENT

ಕಾರ್ಯಾಚರಣೆ ಸ್ಥಳಕ್ಕೆ ತೆರಳುತ್ತಿದ್ದ ಭದ್ರತಾ ಪಡೆ ಸಿಬ್ಬಂದಿ ಇದ್ದ ಟಾಟಾ ಸುಮೊ ಶೋಪಿಯಾನ್‌ ಬಳಿಯ ಚೌಗಮ್‌ ಪ್ರದೇಶದ ಅಪಘಾತಕ್ಕೀಡಾಗಿ 44 ರಾಷ್ಟ್ರೀಯ ರೈಫಲ್ಸ್‌ನ ಮೂವರು ಯೋಧರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.

‘ವಾಹನ ಅಪಘಾತದಲ್ಲಿ ಗಾಯಗೊಂಡ ಎಂಟು ಯೋಧರಲ್ಲಿ ಇಬ್ಬರು ಮಾರ್ಗಮಧ್ಯೆ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟರು. ಉಳಿದ ಐವರು ಶ್ರೀನಗರದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.