ADVERTISEMENT

ದೆಹಲಿಯ ನ್ಯಾಷನಲ್ ಹೆರಾಲ್ಡ್ ಕಚೇರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ ಇ.ಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಆಗಸ್ಟ್ 2022, 13:22 IST
Last Updated 3 ಆಗಸ್ಟ್ 2022, 13:22 IST
ದೆಹಲಿಯ ನ್ಯಾಷನಲ್ ಹೆರಾಲ್ಡ್ ಕಚೇರಿ: ಐಎಎನ್‌ಎಸ್ ಚಿತ್ರ
ದೆಹಲಿಯ ನ್ಯಾಷನಲ್ ಹೆರಾಲ್ಡ್ ಕಚೇರಿ: ಐಎಎನ್‌ಎಸ್ ಚಿತ್ರ   

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಯವು(ಇ.ಡಿ) ಯಂಗ್ ಇಂಡಿಯಾ ಕಂಪನಿಯ ನ್ಯಾಷನಲ್ ಹೆರಾಲ್ಡ್ ಕೇಂದ್ರ ಕಚೇರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದೆ.

ತಮ್ಮ ಅನುಮತಿ ಇಲ್ಲದೆ ಕಚೇರಿಯನ್ನ ತೆರಯದಂತೆ ಇ.ಡಿ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಮಧ್ಯೆ, ಸ್ಥಳದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದ್ದು, ಎಐಸಿಸಿ ಕಚೇರಿ ಮತ್ತು ಸೋನಿಯಾ ಗಾಂಧಿ ನಿವಾಸದ ಬಳಿಯೂಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ADVERTISEMENT

ಮಂಗಳವಾರ, ನವದೆಹಲಿ ನ್ಯಾಷನಲ್ ಹೆರಾಲ್ಡ್ ಕೇಂದ್ರ ಕಚೇರಿ ಸೇರಿದಂತೆ ದೇಶದ 11 ಕಡೆ ಇ.ಡಿ ದಾಳಿ ನಡೆಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿಚಾರಣೆ ಬೆನ್ನಲ್ಲೇ ಈ ದಾಳಿಗಳು ನಡೆದಿದ್ದವು.

ನ್ಯಾಷನಲ್ ಹೆರಾಲ್ಡ್ ಹಾಗೂ ಇತರೆ ಸಂಸ್ಥೆಗಳ ಮಧ್ಯೆ ನಡೆದಿರುವ ವ್ಯವಹಾರ ಹಾಗೂ ಹಣ ಅಕ್ರಮ ವರ್ಗಾವಣೆಯ ತನಿಖೆಯ ಭಾಗವಾಗಿ ಶೋಧ ಕಾರ್ಯಾಚರಣೆ ನಡೆದಿತ್ತು. ಪ್ರಕರಣದಲ್ಲಿ ಹೆಚ್ಚುವರಿ ಸಾಕ್ಷ್ಯಗಳನ್ನು ಸಂಗ್ರಹಿಸಲು ಶೋಧ ನಡೆಸಲಾಗಿದೆ ಎಂದು ಇ.ಡಿ. ಅಧಿಕಾರಿಗಳು ಹೇಳಿದ್ದರು. ಇದೇ ಪ್ರಕರಣದಲ್ಲಿ ನಿಗಾ ಇರಿಸಲಾಗಿರುವ ಕೋಲ್ಕತ್ತದ ಶೆಲ್ ಕಂಪನಿಗೆ (ಹಣ ಅಕ್ರಮ ವರ್ಗಾವಣೆಗಾಗಿ ಸೃಷ್ಟಿಸಲಾಗಿರುವ ಕಂಪನಿ ಎನ್ನಲಾದ) ಸೇರಿದ ಜಾಗದಲ್ಲೂ ಶೋಧ ನಡೆದಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಖಂಡರಾದ ರಾಹುಲ್ ಗಾಂಧಿ, ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಪವನ್ ಬನ್ಸಾಲ್ ಅವರನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಸಿಕ್ಕ ಮಾಹಿತಿ ಆಧರಿಸಿ, ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ವಾರ, ಸೋನಿಯಾ ಅವರನ್ನು 11 ಗಂಟೆ ವಿಚಾರಣೆ ನಡೆಸಲಾಗಿತ್ತು. ಜೂನ್ ತಿಂಗಳಲ್ಲಿ, ರಾಹುಲ್ ಅವರನ್ನು 50 ಗಂಟೆ ವಿಚಾರಣೆಗೆ ಒಳಪಡಿಸಲಾಗಿತ್ತು. ಏಪ್ರಿಲ್‌ನಲ್ಲಿ ಖರ್ಗೆ ಹಾಗೂ ಬನ್ಸಾಲ್ ಅವರನ್ನೂ ವಿಚಾರಣೆ ನಡೆಸಲಾಗಿತ್ತು.

ಇವುಗಳನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.