ADVERTISEMENT

World Environment Day: ಪಿಂಕ್‌ ಸಿಟಿ ಜೈಪುರದಲ್ಲೊಂದು ‘ಟ್ರೀ ಅಂಬುಲೆನ್ಸ್‌‘ !

ಏಳುವರ್ಷಗಳಿಂದ ಗಿಡ–ಮರಗಳ ರಕ್ಷಣೆಗೆ ನಿಂತ ಪರಿಸರಾಸಕ್ತರ ತಂಡ

ಪಿಟಿಐ
Published 5 ಜೂನ್ 2021, 11:12 IST
Last Updated 5 ಜೂನ್ 2021, 11:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜೈಪುರ: ರಾಜಸ್ಥಾನದ ‘ಪಿಂಕ್‌ ಸಿಟಿ‘ ಖ್ಯಾತಿಯ ಜೈಪುರ ನಗರದಲ್ಲಿ ಗಿಡ– ಮರಗಳನ್ನು ರಕ್ಷಿಸುವ ಹಾಗೂ ಆರೈಕೆ ಮಾಡುವುದಕ್ಕಾಗಿ ‘ಟ್ರೀ ಆಂಬುಲೆನ್ಸ್‘ ಎಂಬ ಪರಿಸರಾಸಕ್ತ ತಂಡವೊಂದು ಕಾರ್ಯನಿರ್ವಹಿಸುತ್ತಿದೆ.

ನಗರವನ್ನು ಹಸಿರಾಗಿಸಿ ಮತ್ತು ಪರಿಸರ ಸ್ನೇಹಿಯನ್ನಾಗಿ ಮಾಡಲು ಈ ‘ಟ್ರೀ ಆಂಬುಲೆನ್ಸ್‌‘ ಏಳು ವರ್ಷಗಳಿಂದ ಅಹರ್ನಿಶಿಯಾಗಿ ಕೆಲಸ ಮಾಡುತ್ತಿದೆ. ಈ ತಂಡದ ಸದಸ್ಯರು ಸಸ್ಯ–ಮರಗಳ ಅಗತ್ಯಗಳನ್ನು ಅರಿತು, ಅವುಗಳಿಗೆ ಬೇಕಾದ ಚಿಕಿತ್ಸೆ, ಗೊಬ್ಬರ, ಪೋಷಕಾಂಶ ಪೂರೈಕೆಯಂತಹ ಕಾರ್ಯಗಳನ್ನು ಮಾಡುತ್ತಿದ್ದಾರೆ.

‘ಟೀಮ್‌ 10‘ ನಿಂದ ಟ್ರೀ ಆಂಬುಲೆನ್ಸ್‌ವರೆಗೆ

ADVERTISEMENT

ಇಲ್ಲಿನ ವಿದ್ಯಾಧರ ನಗರದಲ್ಲಿ ‘ಟೀಮ್ 10‘ ಎಂದು ಕರೆಯುವ 100ಕ್ಕೂ ಹೆಚ್ಚು ಸ್ವಯಂಸೇವಕರ ಗುಂಪೊಂದು ಪರಿಸರ ಸಂರಕ್ಷಣೆ ಕೆಲಸ ಮಾಡುತ್ತಿದೆ. ಶನಿವಾರ ವಿಶ್ವ ಪರಿಸರ ದಿನದ ಅಂಗವಾಗಿ ಈ ತಂಡದ ಸದಸ್ಯರು ಕೈಗೊಂಡಿದ್ದ ಪರಿಸರ ರಕ್ಷಣೆಯ ಕಾರ್ಯ ಸುದ್ದಿ ಸಂಸ್ಥೆಯ ಗಮನ ಸೆಳೆಯಿತು. ಯಾವುದೇ ಆರ್ಥಿಕ ಸಹಾಯವಿಲ್ಲದೇ, ‘ಟೀಮ್ 10‘ ತಂಡ ಇಲ್ಲಿವರೆಗೂ ಸುಮಾರು ಒಂದು ಲಕ್ಷ ಸಸಿಗಳನ್ನು ನೆಟ್ಟಿದೆ ಸುಮಾರು ಮೂರು ಲಕ್ಷ ಮರಗಳನ್ನು ಆರೈಕೆ ಮಾಡುತ್ತಿದೆ.

‘ನಮ್ಮದು ನೋಂದಾಯಿತ ಸಂಘಟನೆಯೇ. ಆದರೂ, ನಾವು ಸರ್ಕಾರದಿಂದ ಯಾವುದೇ ಹಣವನ್ನು ತೆಗೆದುಕೊಂಡಿಲ್ಲ. ನನ್ನ ಸ್ನೇಹಿತ ಗೋಪಾಲ್ ವರ್ಮಾ ಮತ್ತು ನಾನು ಏಳು ವರ್ಷಗಳ ಹಿಂದೆ ಇಂಥದ್ದೊಂದು ಪರಿಸರ ರಕ್ಷಣೆಯ ಸೇವೆಯನ್ನು ಆರಂಭಿಸಿದೆವು. ನಮ್ಮ ಹಾಗೆ ಇರುವ ಪರಿಸರ ಆಸಕ್ತರು, ತಂಡದೊಂದಿಗೆ ಕೈಜೋಡಿಸಿದರು‘ ಎಂದು ಮರದ ವ್ಯಾಪಾರಿ ಸುಶೀಲ್ ಅಗರ್ವಾಲ್ ಸುದ್ದಿ ಸಂಸ್ಥೆಗೆ ತಿಳಿಸಿದರು.

ಗಿಡ–ಮರಗಳ ಆರೈಕೆ

‘ಟೀಮ್‌ 10 ತಂಡಕ್ಕೆ ಹೆಚ್ಚು ಹೆಚ್ಚು ಸ್ವಯಂ ಸೇವಕರು, ಪರಿಸರಾಸಕ್ತರು ಸೇರುತ್ತಿದ್ದಂತೆ, ನನ್ನ ಕಾರನ್ನೇ ‘ಟ್ರೀ ಆಂಬುಲೆನ್ಸ್‌‘ ಆಗಿ ಪರಿವರ್ತಿಸಿದೆ. ಗಿಡ–ಮರಗಳ ರಕ್ಷಣೆಗೆ ಬೇಕಾದ ಪರಿಕರಗಳು, ನೀರಿನ ಟ್ಯಾಂಕ್, ರೋಗ–ಕೀಟ ನಿವಾರಕ ಔಷಧಗಳು, ಗೊಬ್ಬರ ಇತ್ಯಾದಿಗಳನ್ನು ಸಾಗಿಸಲು ಈ ಆಂಬುಲೆನ್ಸ್‌ ಬಳಸಲಾರಂಭಿಸಿದೆವು. ಇದೇ ಟ್ರೀ ಆಂಬುಲೆನ್ಸ್‌ ಆಯಿತು‘ ಎಂದು ಅವರು ಟ್ರೀ ಆಂಬುಲೆನ್ಸ್‌ ಹಿಂದಿನ ಕಥೆ ವಿವರಿಸಿದರು.

‘ಈ ವಿದ್ಯಾಧರ ನಗರವನ್ನು ದೇಶದಲ್ಲೇ ಹಸಿರು ಮತ್ತು ಸ್ವಚ್ಛವಾಗಿರುವ ತಾಣವನ್ನಾಗಿಸಬೇಕೆಂಬ ಕನಸು ಹೊಂದಿದ್ದೇವೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ‘ ಎಂದು 53 ವರ್ಷದ ಅಗರ್ವಾಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.