
ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಚಂದಾದಾರರು ಪ್ರಸಕ್ತ ಸಾಲಿನ ಏಪ್ರಿಲ್ ನಂತರ ನೌಕರರ ಭವಿಷ್ಯ ನಿಧಿಯನ್ನು (ಇಪಿಎಫ್) ಯುಪಿಐ ಆಧಾರಿತ ಪಾವತಿ ಮೂಲಕ ಹಿಂತೆಗೆದುಕೊಳ್ಳಬಹುದು.
ಯುಪಿಐ ‘ಆಟೊ ಸೆಟಲ್‌ಮೆಂಟ್’ ಆಯ್ಕೆಯಡಿ ಅರ್ಜಿ ಸಲ್ಲಿಸಿದ ಮೂರು ದಿನಗಳಲ್ಲೇ ಮೊತ್ತವು ಚಂದಾದಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗುತ್ತದೆ. ಭವಿಷ್ಯನಿಧಿ ಹಿಂತೆಗೆದುಕೊಳ್ಳುವಾಗ ಹಳೆಯ ವ್ಯವಸ್ಥೆಯಲ್ಲಿ ಆಗುತ್ತಿದ್ದ ವಿಳಂಬವು ಹೊಸ ವ್ಯವಸ್ಥೆಯಲ್ಲಿ ತಪ್ಪಲಿದೆ ಎಂದು ಮೂಲಗಳು ತಿಳಿಸಿವೆ.
ಭವಿಷ್ಯನಿಧಿಯನ್ನು ಹಿಂತೆಗೆದುಕೊಳ್ಳುವುದು ಮಾತ್ರವಲ್ಲ, ಬಾಕಿ ಉಳಿದಿರುವ ಮೊತ್ತವನ್ನೂ ಯುಪಿಐ ಮೂಲಕ ಪರಿಶೀಲಿಸಿಕೊಳ್ಳಬಹುದು. ಉದ್ಯೋಗಿ ಮತ್ತು ಉದ್ಯೋಗದಾತ ಕಂಪನಿ ಇಬ್ಬರ ಪಾಲೂ ಸೇರಿ ಒಟ್ಟು ಅರ್ಹವಿರುವ ಶೇ 100ರಷ್ಟು ಮೊತ್ತವನ್ನೂ ಹಿಂತೆಗೆದುಕೊಳ್ಳಲು ಕಾರ್ಮಿಕರಿಗೆ ಅವಕಾಶವಿದೆ.
ಇಪಿಎಫ್ ಖಾತೆಯಿಂದ ಬ್ಯಾಂಕ್ ಖಾತೆಗೆ ಹಣವು ಸುರಕ್ಷಿತವಾಗಿ ವರ್ಗಾವಣೆಯಾಗಲು, ಚಂದಾದಾರರು ತಮ್ಮ ಲಿಂಕ್ ಮಾಡಲಾದ ಯುಪಿಐ ಪಿನ್ ಬಳಸಬೇಕು. ಒಮ್ಮೆ ಹಣವು ಬ್ಯಾಂಕ್ ಖಾತೆಗೆ ಜಮಾಗೊಂಡ ನಂತರ, ಆ ಮೊತ್ತವನ್ನು ಇನ್ನೊಂದು ಖಾತೆಗೆ ವರ್ಗಾಯಿಸಿಕೊಳ್ಳಲು ಅಥವಾ ಎಟಿಎಂ ಮೂಲಕ ತೆಗೆದುಕೊಳ್ಳಲು ಚಂದಾದಾರರಿಗೆ ಅವಕಾಶವಿರುತ್ತದೆ.
ಸದ್ಯ ಯುಪಿಐ ಆಧಾರಿತ ಪಾವತಿ ವ್ಯವಸ್ಥೆಯಲ್ಲಿನ ಸಾಫ್ಟ್‌ವೇರ್ ಲೋಪಗಳನ್ನು ಇಪಿಎಫ್‌ಒ ಸರಿಪಡಿಸುತ್ತಿದೆ. ಈ ಯೋಜನೆ ಜಾರಿಗೆ ಬಂದರೆ ಸುಮಾರು 8 ಕೋಟಿಯಷ್ಟು ಚಂದಾದಾರರಿಗೆ ಅನುಕೂಲವಾಗಲಿದೆ.
ತುರ್ತು ಹಣಕಾಸು ಅಗತ್ಯ ಇರುವ ಕಾರ್ಮಿಕರಿಗೆ ನೆರವಾಗುವ ಉದ್ದೇಶದಿಂದ ಕೋವಿಡ್–19 ಸಂದರ್ಭದಲ್ಲಿ ಇಪಿಎಫ್‌ಒ ಮೊದಲ ಬಾರಿಗೆ ಆನ್‌ಲೈನ್ ಆಟೊ ಸೆಟಲ್‌ಮೆಂಟ್ ಆಯ್ಕೆಯನ್ನು ಪರಿಚಯಿಸಿತ್ತು. ಪ್ರತಿವರ್ಷ ಸುಮಾರು 5 ಲಕ್ಷದಷ್ಟು ಇಪಿಎಫ್ ಕ್ಲೇಮ್‌ಗಳನ್ನು ಇಪಿಎಫ್‌ಒ ಇತ್ಯರ್ಥಪಡಿಸುತ್ತದೆ.
ಇಪಿಎಫ್‌ಒ ಯಾವುದೇ ಬ್ಯಾಂಕಿಂಗ್ ಪರವಾನಗಿ ಹೊಂದಿರದ ಕಾರಣ, ಚಂದಾದಾರರಿಗೆ ಇಪಿಎಫ್ ಖಾತೆಗಳಿಂದ ನೇರವಾಗಿ ಹಣವನ್ನು ಹಿಂತೆಗೆದುಕೊಳ್ಳಲು ಅವಕಾಶ ಇರುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.