ADVERTISEMENT

ಶ್ರೀನಗರಕ್ಕೆ 24 ದೇಶಗಳ ರಾಜತಾಂತ್ರಿಕ ಅಧಿಕಾರಿಗಳ ಭೇಟಿ

ಪಿಟಿಐ
Published 17 ಫೆಬ್ರುವರಿ 2021, 19:39 IST
Last Updated 17 ಫೆಬ್ರುವರಿ 2021, 19:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿನ ವಿಶೇಷ ಸ್ಥಾನಮಾನವನ್ನು 2019ರಲ್ಲಿ ರದ್ದುಪಡಿಸಿದ ನಂತರ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು ಫ್ರಾನ್ಸ್‌, ಯುರೋಪ್‌ ಒಕ್ಕೂಟ ಹಾಗೂ ಮಲೇಷ್ಯಾ ಸೇರಿದಂತೆ 24 ದೇಶಗಳ ರಾಜತಾಂತ್ರಿಕ ಅಧಿಕಾರಿಗಳು ಬುಧವಾರ ಕಣಿವೆ ರಾಜ್ಯಕ್ಕೆ ಬಂದಿಳಿದಿದ್ದಾರೆ.

ಎರಡು ದಿನಗಳ ಭೇಟಿಗಾಗಿ ಆಗಮಿಸಿರುವ ನಿಯೋಗದಲ್ಲಿ ಬ್ರೆಜಿಲ್, ಇಟಲಿ, ಫಿನ್ಲೆಂಡ್, ಬಾಂಗ್ಲಾದೇಶ, ಕ್ಯೂಬಾ, ಚಿಲಿ, ಪೋರ್ಚುಗಲ್, ನೆದರ್ಲೆಂಡ್ಸ್, ಬೆಲ್ಜಿಯಂ, ಸ್ಪೇನ್, ಸ್ವೀಡನ್, ಸೆನೆಗಲ್, ತಜಿಕಿಸ್ತಾನ್, ಕಿರ್ಗಿಸ್ತಾನ್, ಐರ್ಲೆಂಡ್, ಘಾನಾ, ಎಸ್ಟೋನಿಯಾ, ಬೊಲಿವಿಯಾ, ಮಾಲವಿ, ಎರಿಟ್ರಿಯಾ,ಐವರಿ ಕೋಸ್ಟ್‌ ರಾಷ್ಟ್ರಗಳ ರಾಜತಾಂತ್ರಿಕರು ಇದ್ದಾರೆ.

ನಿಯೋಗವನ್ನು ಬರಮಾಡಿಕೊಂಡ ಅಧಿಕಾರಿಗಳು, ಕಾಶ್ಮೀರದ ಕೇಂದ್ರಭಾಗ ಬುಡ್ಗಾಂನಲ್ಲಿರುವ ಸರ್ಕಾರಿ ಕಾಲೇಜಿಗೆ ಕರೆದೊಯ್ದರು. ಅಲ್ಲಿ ಪಂಚಾಯತ್ ರಾಜ್‌ ವ್ಯವಸ್ಥೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಬಲವರ್ಧನೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.

ADVERTISEMENT

ನಿಯೋಗದ ಸದಸ್ಯರು ಪಂಚರು ಮತ್ತು ಸರಪಂಚರ ಜತೆಗೆ ಕಣಿವೆಯಲ್ಲಿ ಮುಕ್ತವಾಗಿ ಪ್ರಯಾಣಿಸುತ್ತಾ, ಅವರ ಕುಂದುಕೊರತೆಗಳನ್ನು ಆಲಿಸಿದರು.

ಗುರುವಾರ ಜಮ್ಮುವಿಗೆ ಭೇಟಿ ನೀಡಿರಲಿರುವ ನಿಯೋಗದ ಸದಸ್ಯರು, ಅಲ್ಲಿ ಕೇಂದ್ರಾಡಳಿತ ಅಧಿಕಾರಿಗಳನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಜಿಲ್ಲಾ ಅಭಿವೃದ್ಧಿ ಮಂಡಳಿ ಸದಸ್ಯರು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳನ್ನೂ ಭೇಟಿ ಮಾಡಲು ನಿರ್ಧರಿಸಿದ್ದಾರೆ.

ಅಲ್ಲದೇ, ದಾಲ್ ಸರೋವರದ ದಂಡೆಯಲ್ಲಿರುವ ಪವಿತ್ರ ಹಜರತ್ಬಲ್ ಮಂದಿರಕ್ಕೂ ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಭೇಟಿ ಹಿನ್ನೆಲೆಯಲ್ಲಿ ಶ್ರೀನಗರ ಸೇರಿದಂತೆ ಕಣಿವೆಯ ಹಲವಡೆ ಬಿಗಿ ಭದ್ರತೆಯ ವ್ಯವಸ್ಥೆ ಮಾಡಲಾಗಿತ್ತು. ಶ್ರೀನಗರದ ಕೆಲವು ಭಾಗಗಳಲ್ಲಿ ಅಂಗಡಿಮುಂಗಟ್ಟು ಮುಚ್ಚಲಾಗಿತ್ತು. ಲಾಲ್‌ಚೌಕ ಮತ್ತು ಸುತ್ತಮುತ್ತಲ ಪ್ರದೇಶದಲ್ಲೂ ಅಂಗಡಿಮುಂಗಟ್ಟು ಬಂದ್‌ ಮಾಡಲಾಗಿತ್ತು.

ನಿಯೋಗ ಸಾಗುವ ಮಾರ್ಗದುದ್ದಕ್ಕೂಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.