ADVERTISEMENT

ಬಡವರ ಮೇಲಿನ ದಾಳಿ ಲಾಕ್‌ಡೌನ್: ರಾಹುಲ್ ಗಾಂಧಿ

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌‌ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ

ಪಿಟಿಐ
Published 9 ಸೆಪ್ಟೆಂಬರ್ 2020, 12:30 IST
Last Updated 9 ಸೆಪ್ಟೆಂಬರ್ 2020, 12:30 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ‘ಲಾಕ್‌ಡೌನ್‌ ಜಾರಿ ಕೊರೊನಾ ವೈರಸ್‌ ವಿರುದ್ಧದ ದಾಳಿಯಲ್ಲ. ಬದಲಿಗೆ ಬಡವರ ಮೇಲಿನ ದಾಳಿಯಾಗಿದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ಲಾಕ್‌ಡೌನ್‌ ಮತ್ತು ಆರ್ಥಿಕತೆ ಸಂಬಂಧ ರಾಹುಲ್‌ ಗಾಂಧಿ ಬಿಡುಗಡೆ ಮಾಡಿರುವ ನಾಲ್ಕನೇ ವಿಡಿಯೊ ಇದಾಗಿದ್ದು, ‘ಅಸಂಘಟಿತ ವಲಯಕ್ಕೆ ಲಾಕ್‌ಡೌನ್‌ ಮರಣದಂಡನೆ ಎಂಬುದು ಸಾಬೀತಾಗಿದೆ. ಇದು ಬಡವರು, ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ಮೇಲಿನ ದಾಳಿಯೂ ಹೌದು’ ಎಂದು ಅವರು ಕಿಡಿಕಾರಿದ್ದಾರೆ.

ಮೋದಿ ಅವರ ಜನ ವಿರೋಧಿ ‘ವಿಪತ್ತು ಯೋಜನೆ’ ಕುರಿತು ತಿಳಿಯಲು ಈ ವಿಡಿಯೊ ನೋಡಿ ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.

ADVERTISEMENT

‘ಪ್ರತಿಯೊಬ್ಬರು ಈ ದಾಳಿಯ ವಿರುದ್ಧ ನಿಲ್ಲಬೇಕು. ಇದು ನಮ್ಮ ಯುವಕರ ಭವಿಷ್ಯದ ಮೇಲಿನ ಆಕ್ರಮಣವಾಗಿದೆ. ಅಸಂಘಟಿತ ವಲಯದ ಮೇಲೆ ಕೊರೊನಾ ಹೆಸರಿನಲ್ಲಿ ಮೂರನೇ ದಾಳಿ ಮಾಡಲಾಗಿದೆ’ ಎಂದಿದ್ದಾರೆ.

‘ಬಡವರು, ಸಣ್ಣ ಮತ್ತು ಮಧ್ಯಮ ವ್ಯಾಪಾರಸ್ಥರು, ಕೂಲಿ ಕಾರ್ಮಿಕರು ದಿನದ ಗಳಿಕೆಯನ್ನು ಅವಲಂಬಿಸಿ ಅದರಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಆದರೆ, ಸರ್ಕಾರ ಯಾವುದೇ ಮುನ್ಸೂಚನೆಯಿಲ್ಲದೆ ಲಾಕ್‌ಡೌನ್ ಘೋಷಿಸುವ ಮೂಲಕ ಅವರ ಹೊಟ್ಟೆಯ ಮೇಲೆ ಹೊಡೆದಿದೆ. ಕೊರೊನಾ ವಿರುದ್ಧ 21 ದಿನಗಳ ಹೋರಾಟ ನಡೆಯಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ, ಈ ಅವಧಿಯಲ್ಲಿ ಲಕ್ಷಗಟ್ಟಲೆ ಉದ್ಯೋಗ ಮತ್ತು ಸಣ್ಣ ಉದ್ದಿಮೆಗಳನ್ನು ನಿರ್ನಾಮಗೊಳಿಸಿದರು’ ಎಂದು ಹೇಳಿದ್ದಾರೆ.

‘ಲಾಕ್‍ಡೌನ್‍ ತೆರವಿನ ನಂತರ ಬಡವರಿಗೆ ಸಹಾಯ ಮಾಡುವುದು ಅಗತ್ಯ. ‘ನ್ಯಾಯ್‍’ ನಂತಹ ಯೋಜನೆಯನ್ನು ಜಾರಿಗೆ ತರಬೇಕು, ಮತ್ತು ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಬೇಕು ಎಂದು ಕಾಂಗ್ರೆಸ್ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಹಲವಾರು ಬಾರಿ ಹೇಳಿದೆ. ಆದರೆ ಸರ್ಕಾರ ಅದನ್ನು ಮಾಡಿಲ್ಲ’ ಎಂದು ರಾಹುಲ್‍ಗಾಂಧಿ ಹೇಳಿದ್ದಾರೆ.

‘ಸಣ್ಣ ಮತ್ತು ಮಧ್ಯಮ ವ್ಯಾಪಾರಗಳಿಗೆ ಸರ್ಕಾರ ಪ್ಯಾಕೇಜ್ ಸಿದ್ಧಪಡಿಸಬೇಕು ಎಂದು ನಾವು ಸೂಚಿಸಿದ್ದೇವೆ. ಹಣವಿಲ್ಲದೆ ಅವರು ಬದುಕಲು ಸಾಧ್ಯವಾಗುವುದಿಲ್ಲ. ಆದರೆ ಸರ್ಕಾರ ಯಾವ ವ್ಯವಸ್ಥೆಯನ್ನು ಮಾಡಿಲ್ಲ. ಬದಲಾಗಿ, ಹದಿನೈದು-ಇಪ್ಪತ್ತು ಸಿರಿವಂತರ ಕೋಟ್ಯಂತರ ಮೌಲ್ಯದ ತೆರಿಗೆಯನ್ನು ಮನ್ನಾ ಮಾಡಿದೆ’ ಎಂದು ಅವರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.