ADVERTISEMENT

WAQF LAW ವಿರುದ್ಧದ ಹೊಸ ಅರ್ಜಿ: ‘ಎಲ್ಲರಿಗೂ ಪತ್ರಿಕೆಯಲ್ಲಿ ಹೆಸರು ಬೇಕು’ ಎಂದ SC

ವಕ್ಫ್ ಕಾನೂನು ವಿರುದ್ಧದ ಹೊಸ ಅರ್ಜಿಗಳಿಗೆ ಸುಪ್ರೀಂ ಕೋರ್ಟ್ ನಕಾರ

ಪಿಟಿಐ
Published 16 ಮೇ 2025, 11:16 IST
Last Updated 16 ಮೇ 2025, 11:16 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆ, 2025ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಒಂದೆರಡು ಹೊಸ ಅರ್ಜಿಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದ್ದು, ಎಲ್ಲರೂ ಪತ್ರಿಕೆಗಳಲ್ಲಿ ಹೆಸರು ಪ್ರಕಟವಾಗಬೇಕೆಂದು ಬಯಸುತ್ತಾರೆ ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಬಿ.ರ್. ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠವು ಮೇ 20 ರಂದು ಬಾಕಿ ಇರುವ ಅರ್ಜಿಗಳ ಕುರಿತು ವಿಚಾರಣೆ ನಡೆಸುವುದಾಗಿ ಹೇಳಿದೆ.

ADVERTISEMENT

ವಕ್ಫ್ ತಿದ್ದುಪಡಿ ಕಾಯ್ದೆ,ಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಶುಕ್ರವಾರ ಒಂದು ಅರ್ಜಿ ವಿಚಾರಣೆಗೆ ಬಂದ ತಕ್ಷಣ, ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆಕ್ಷೇಪ ವ್ಯಕ್ತಪಡಿಸಿದರು. ಈ ಕುರಿತಂತೆ ಅಂತ್ಯವಿಲ್ಲದಷ್ಟು ಅರ್ಜಿಗಳ ಸಲ್ಲಿಕೆಗೆ ಅನುಮತಿ ನೀಡಬಾರದು ಎಂದು ಕೋರಿದರು.

ಅರ್ಜಿದಾರರ ಪರ ಹಾಜರಾದ ವಕೀಲರು ಏಪ್ರಿಲ್ 8ರಂದು ಅರ್ಜಿ ಸಲ್ಲಿಸಿರುವುದಾಗಿ ಮತ್ತು ಏಪ್ರಿಲ್ 15ರಂದು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಸೂಚಿಸಿದ ದೋಷಗಳನ್ನು ತೆಗೆದುಹಾಕಲಾಗಿದೆ. ಆದರೂ, ನಮ್ಮ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ಪ್ರತಿಯೊಬ್ಬರಿಗೂ ದಿನಪತ್ರಿಕೆಯಲ್ಲಿ ಹೆಸರು ಬರಬೇಕೆಂಬ ಬಯಕೆ ಇದೆ ಎಂದರು.

ಈಗ ಬಾಕಿ ಇರುವ ಅರ್ಜಿಗಳ ಜೊತೆ ಇದನ್ನೂ ವಿಚಾರಣೆಗೆ ಪರಿಗಣಿಸಬೇಕು ಎಂಬ ವಕೀಲರ ವಾದ ತಳ್ಳಿಹಾಕಿದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು. ಇದೇವೇಳೆ, ಸಲ್ಲಿಸಲಾದ ಮತ್ತೊಂದು ಅರ್ಜಿಯನ್ನೂ ವಜಾಗೊಳಿಸಲಾಯಿತು.

ವಕ್ಫ್ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ತನ್ನ ಮುಂದೆ ಇರುವ ಒಟ್ಟು ಅರ್ಜಿಗಳಲ್ಲಿ ಕೇವಲ ಐದು ಅರ್ಜಿಗಳನ್ನು ಮಾತ್ರ ವಿಚಾರಣೆ ಮಾಡಲು ಏಪ್ರಿಲ್ 17ರಂದು ಸುಪ್ರೀಂ ಕೋರ್ಟ್ ನಿರ್ಧರಿಸಿತ್ತು.

ಈ ಅರ್ಜಿಗಳು ಮೇ 15ರಂದು ಸಿಜೆಐ ಮತ್ತು ನ್ಯಾಯಮೂರ್ತಿ ಮಸಿಹ್ ಅವರನ್ನೊಳಗೊಂಡ ಪೀಠದ ಮುಂದೆ ವಿಚಾರಣೆಗೆ ಬಂದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.