ADVERTISEMENT

ಲೋಕಸಭಾ ಚುನಾವಣೆ: ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಬಿಜೆಪಿ ಅಭ್ಯರ್ಥಿ?

ನವದೆಹಲಿ

ಏಜೆನ್ಸೀಸ್
Published 12 ಮಾರ್ಚ್ 2019, 10:06 IST
Last Updated 12 ಮಾರ್ಚ್ 2019, 10:06 IST
   

ನವದೆಹಲಿ: ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗಿರುವ ಬೆನ್ನಲೇ ಕಣಕ್ಕಿಳಿಯಲಿರುವ ಆಕಾಂಕ್ಷಿಗಳ ಹೆಸರು ಮೇಲಿಂದ ಮೇಲೆ ತೇಲಿ ಬರುತ್ತಲೇ ಇವೆ. ಈ ಸಾಲಿನಲ್ಲಿ ಸೆಲೆಬ್ರಿಟಿಗಳೂ ಸೇರಿದ್ದು, ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ನವದೆಹಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.

ಬಿಜೆಪಿಯ ಮೀನಾಕ್ಷಿ ಲೇಖಿ ನವದೆಹಲಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು, ಇದೇ ಕ್ಷೇತ್ರದಿಂದ ಭಾರತ ಕ್ರಿಕೆಟ್‌ ತಂಡದ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌(37) ಕಣಕ್ಕಿಳಿಯಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಗಂಭೀರ್‌ ಇದೇ ಕ್ಷೇತ್ರದ ರಾಜಿಂದರ್‌ ನಗರದ ನಿವಾಸಿಯಾಗಿದ್ದಾರೆ.

545 ಲೋಕಸಭಾ ಕ್ಷೇತ್ರಗಳ ಪೈಕಿ ದೆಹಲಿ ಏಳು ಕ್ಷೇತ್ರಗಳನ್ನು ಹೊಂದಿದೆ. ರಾಷ್ಟ್ರ ರಾಜಧಾನಿಯಲ್ಲಿ ಮೀನಾಕ್ಷಿ ಲೇಖಿ ಅವರಿಗೆ ಮತ್ತೊಂದು ಕ್ಷೇತ್ರವನ್ನು ಬಿಟ್ಟು ಕೊಡಲಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಪದ್ಮಶ್ರೀ ಪುರಸ್ಕೃತರಾಗಿರುವ ಗೌತಮ್‌ ಗಂಭೀರ್‌ ಈವೆರೆಗೂ ರಾಜಕೀಯ ಸೇರ್ಪಡೆಯಾಗುವ ಇರಾದೆ ವ್ಯಕ್ತಪಡಿಸಿಲ್ಲ.

ADVERTISEMENT

2014ರ ಚುನಾವಣೆಯಲ್ಲಿ ಪಂಜಾಬ್‌ನ ಅಮೃತಸರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೇಂದ್ರ ಸಚಿವ ಅರುಣ್‌ ಜೇಟ್ಲಿ ಪರವಾಗಿ ಗೌತಮ್‌ ಗಂಭೀರ್ ಪ್ರಚಾರ ನಡೆಸಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಮರಿಂದರ್‌ ಸಿಂಗ್‌ ವಿರುದ್ಧ ಜೇಟ್ಲಿ ಸೋಲು ಅನುಭವಿಸಿದ್ದರು. ಅಮರಿಂದರ್‌ ಸಿಂಗ್‌ ಪ್ರಸ್ತುತ ಪಂಜಾಬ್‌ನ ಮುಖ್ಯಮಂತ್ರಿಯಾಗಿ ಆಡಳಿತ ನಿರ್ವಹಿಸುತ್ತಿದ್ದಾರೆ.

ಭಾರತ ಕ್ರಿಕೆಟ್‌ ತಂಡದ ಓಪನಿಂಗ್‌ ಬ್ಯಾಟ್ಸ್‌ಮನ್‌ ಆಗಿದ್ದ ಗೌತಮ್‌ ಗಂಭೀರ್‌ 2018ರ ಡಿಸೆಂಬರ್‌ನಲ್ಲಿ ಎಲ್ಲ ರೀತಿಯ ಕ್ರಿಕೆಟ್‌ ಆಟದಿಂದ ನಿವೃತ್ತಿ ಪಡೆದುಕೊಂಡರು. ಬಡವರು, ಹಸಿದವರಿಗೆ ಊಟ ನೀಡುವ ’ಕಮ್ಯುನಿಟಿ ಕಿಚನ್‌’ ನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಕ್ರಿಕೆಟ್‌ ಪಂದ್ಯಗಳಿಗೆ ಕಮೆಂಟೆಟರ್‌ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲರಾಗಿರುವ ಗಂಭೀರ್‌ ರಾಜಕೀಯ ವಿದ್ಯಮಾನಗಳ ಬಗೆಗೆ ಆಗಾಗ್ಗೆ ಟೀಕಾಸ್ತ್ರ ಪ್ರಯೋಗಿಸುತ್ತಿರುತ್ತಾರೆ. ಪುಲ್ವಾಮಾ ಉಗ್ರ ದಾಳಿಯ ಬಳಿಕ; ಆ ಬಗ್ಗೆ ಗಂಭೀರ್‌ ಸಾಕಷ್ಟು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಯೋಧರ ಮಕ್ಕಳ ಶಿಕ್ಷಣಕ್ಕಾಗಿ ಅಗತ್ಯ ಸಹಕಾರ ನೀಡಲು ಪಣತೊಟ್ಟಿದ್ದರು. ದೆಹಲಿ ಮುಖ್ಯಮಂತ್ರಿ ಎಎಪಿಯ ಅರವಿಂದ್‌ ಕೇಜ್ರಿವಾಲ್‌ ಆಡಳಿತವನ್ನು ಗಂಭೀರ್‌ ಗಂಭೀರವಾಗಿಯೇ ಟೀಕಿಸುತ್ತಿರುತ್ತಾರೆ.

ದೆಹಲಿ ಲೋಕಸಭಾ ಚುನಾವಣೆಯಲ್ಲಿ ಎಎಪಿ ಮತ್ತು ಕಾಂಗ್ರೆಸ್‌ ಮೈತ್ರಿಯ ಬಾಗಿಲು ಮುಚ್ಚಿರುವುದರಿಂದ ಮೂರೂ ಪಕ್ಷಗಳು ಪೈಕೋಟಿ ಹೋರಾಟ ನಡೆಸಲು ಅಣಿಯಾಗುತ್ತಿವೆ. 2014ರಲ್ಲಿ ಎಲ್ಲ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಮೇ 12ರಂದು ದೆಹಲಿ ಲೋಕಸಭಾ ಕ್ಷೇತ್ರದ ಚುನಾವಣೆ ನಿಗದಿಯಾಗಿದೆ. ಮೇ 23ರಂದು ಫಲಿತಾಂಶ ಘೋಷಣೆಯಾಗಲಿದೆ.

ಗೌತಮ್‌ ಗಂಭೀರ್‌ ರಾಜಕೀಯ ಸೇರ್ಪಡೆಯಾದರೆ, ಕೀರ್ತಿ ಆಜಾದ್‌, ಮೊಹಮ್ಮದ್‌ ಅಝರುದ್ದೀನ್‌, ನವಜೋತ್‌ ಸಿಧು ಹಾಗೂ ಮೊಹಮ್ಮದ್‌ ಕೈಫ್‌ ಸಾಲಿಗೆ ಸೇರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.