ನಾಗ್ಪುರ ಕೇಂದ್ರ ಕಾರಾಗೃಹದಿಂದ ಗುರುವಾರ ಹೊರಬಂದ ದೆಹಲಿ ವಿಶ್ವವಿದ್ಯಾಲಯ ಮಾಜಿ ಪ್ರೊಫೆಸರ್ ಜಿ.ಎನ್. ಸಾಯಿಬಾಬ
–ಪಿಟಿಐ ಚಿತ್ರ
ನಾಗ್ಪುರ: ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್. ಸಾಯಿಬಾಬಾ ಅವರು ನಾಗ್ಪುರದ ಕೇಂದ್ರ ಕಾರಾಗೃಹದಿಂದ ಗುರುವಾರ ಬಿಡುಗಡೆಯಾದರು. ಮಾವೋವಾದಿಗಳ ಜೊತೆಗೆ ನಂಟು ಹೊಂದಿದ್ದ ಆರೋಪ ಎದುರಿಸುತ್ತಿದ್ದ ಅವರನ್ನು ಬಾಂಬೆ ಹೈಕೋರ್ಟ್ ದೋಷಮುಕ್ತಗೊಳಿಸಿದ ಎರಡು ದಿನಗಳ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು.
ಮಹಾರಾಷ್ಟ್ರದ ಗಢಚಿರೋಲಿ ಜಿಲ್ಲೆಯ ವಿಚಾರಣಾ ನ್ಯಾಯಾಲಯವು ಅವರ ಮೇಲಿದ್ದ ಆರೋಪ ಸಾಬೀತುಪಡಿಸಿ 2017ರಲ್ಲಿ ಆದೇಶ ಹೊರಡಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ಅವರು ನಾಗ್ಪುರ ಕಾರಾಗೃಹದಲ್ಲಿ ಬಂಧನದಲ್ಲಿದ್ದರು.
ವೀಲ್‌ಚೇರ್‌ನಲ್ಲಿ ಜೈಲಿನಿಂದ ಹೊರಬಂದ ಸಾಯಿಬಾಬಾ ಅವರು, ‘ನನ್ನ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ನಾನು ಮೊದಲು ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಆ ನಂತರವೇ ಮಾತನಾಡಲು ಸಾಧ್ಯ’ ಎಂದು ಸುದ್ದಿಗಾರರಿಗೆ ಹೇಳಿದರು. ಅವರನ್ನು ಬರಮಾಡಿಕೊಳ್ಳಲು ಕುಟುಂಬ ಸದಸ್ಯರೊಬ್ಬರು ಕಾರಾಗೃಹದ ಎದುರು ಕಾದಿದ್ದರು.
ಸಾಯಿಬಾಬಾ ಸೇರಿ ಐವರ ವಿರುದ್ಧ ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದಿದ್ದ ಹೈಕೋರ್ಟ್, ಅವರಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.