ADVERTISEMENT

₹100 ಕೋಟಿ ಸಂಗ್ರಹದ ಆರೋಪ ನಿವೃತ್ತ ನ್ಯಾಯಮೂರ್ತಿಯಿಂದ ತನಿಖೆ: ದೇಶಮುಖ್‌

ಪಿಟಿಐ
Published 28 ಮಾರ್ಚ್ 2021, 9:17 IST
Last Updated 28 ಮಾರ್ಚ್ 2021, 9:17 IST
ಅನಿಲ್‌ ದೇಶಮುಖ್‌
ಅನಿಲ್‌ ದೇಶಮುಖ್‌   

ನಾಗಪುರ: ತನ್ನ ವಿರುದ್ಧ ಮುಂಬೈ ಮಾಜಿ ಪೊಲೀಸ್‌ ಕಮಿಷನರ್‌ ಮಾಡಿರುವ ಆರೋಪದ ಕುರಿತು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯಿಂದ ತನಿಖೆ ನಡೆಯಲಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶಮುಖ್‌ ಭಾನುವಾರ ಹೇಳಿದ್ದಾರೆ.

ತನಿಖೆಯ ಬಳಿಕ ಸತ್ಯ ಏನು ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ ಎಂದು ಅವರು ನಾಗಪುರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ನನ್ನ ಮೇಲೆ ಬಂದಿರುವ ಆರೋಪಗಳ ಬಗ್ಗೆ ವಿಚಾರಣೆ ನಡೆಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಕೋರಿದ್ದೆ. ಇದೀಗ ಮುಖ್ಯಮಂತ್ರಿ ಅವರು ಈ ಕುರಿತು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಒಬ್ಬರಿಂದ ತನಿಖೆ ನಡೆಸಲು ನಿರ್ಧರಿಸಿದ್ದಾರೆ. ತನಿಖೆಯಿಂದ ಸತ್ಯಾಂಶ ಹೊರಬರುತ್ತದೆ‘ ಎಂದು ದೇಶಮುಖ್‌ ಹೇಳಿದರು.

ADVERTISEMENT

ಪೊಲೀಸ್‌ ಅಧಿಕಾರಿಗಳು ನಗರದ ಬಾರ್‌ ಮತ್ತು ರೆಸ್ಟೊರೆಂಟ್‌ಗಳಿಂದ ಪ್ರತಿ ತಿಂಗಳು ₹100 ಕೋಟಿ ಸಂಗ್ರಹಿಸಿ ಕೊಡಬೇಕು ಎಂದು ಗೃಹ ಸಚಿವ ಅನಿಲ್‌ ದೇಶಮುಖ್‌ ಸೂಚಿಸಿದ್ದಾರೆ ಎಂದು ಆರೋಪಿಸಿ ಮುಂಬೈನ ಮಾಜಿ ಪೊಲೀಸ್‌ ಕಮಿಷನರ್‌ ಪರಮ್‌ ವೀರ್‌ ಸಿಂಗ್‌ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಮಾರ್ಚ್‌ 20ರಂದು ಪತ್ರ ಬರೆದಿದ್ದರು. ಇದು ಮಹಾರಾಷ್ಟ್ರ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿತ್ತು.

ಈ ಎಲ್ಲ ಆರೋಪಗಳನ್ನು ದೇಶಮುಖ್‌ ಅವರು ತಳ್ಳಿಹಾಕಿದ್ದರು.

ಉದ್ಯಮಿ ಮುಕೇಶ್‌ ಅಂಬಾನಿ ಮನೆಯ ಸಮೀಪ ಸ್ಫೋಟಕ ತುಂಬಿದ್ದ ಕಾರು ಪತ್ತೆಯಾದ ಬಳಿಕ ಮಹಾರಾಷ್ಟ್ರ ಸರ್ಕಾರ ಮಾರ್ಚ್‌ 17ರಂದು ಸಿಂಗ್‌ ಅವರನ್ನು ಗೃಹ ರಕ್ಷಕ ಇಲಾಖೆಗೆ ವರ್ಗಾಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.