ADVERTISEMENT

ವಂಜಾರಾಗೆ ನಿವೃತ್ತಿಯ ನಂತರ ಬಡ್ತಿ

ಪಿಟಿಐ
Published 26 ಫೆಬ್ರುವರಿ 2020, 19:45 IST
Last Updated 26 ಫೆಬ್ರುವರಿ 2020, 19:45 IST

ಅಹಮದಾಬಾದ್ : ಗುಜರಾತ್‌ನ ಮಾಜಿ ಐಪಿಎಸ್ ಅಧಿಕಾರಿ ಡಿ.ಜಿ. ವಂಜಾರ ಅವರು ನಿವೃತ್ತಿಯಾಗಿ 6 ವರ್ಷಗಳ ಬಳಿಕ, ರಾಜ್ಯ ಸರ್ಕಾರ ಐಜಿಪಿ ಹುದ್ದೆಗೆ ಬಡ್ತಿ ನೀಡಿದೆ.

ಇಶ್ರತ್ ಜಹಾನ್ ಮತ್ತು ಸೊಹ್ರಾಬುದ್ದೀನ್ ಶೇಖ್ ಅವರ ನಕಲಿ ಎನ್‌ಕೌಂಟರ್‌ನಲ್ಲಿ ಆರೋಪಿಯಾಗಿದ್ದ ವಂಜಾರ, ನಂತರ ಬಿಡುಗಡೆ ಹೊಂದಿದ್ದರು.

ಈ ಎನ್‌ಕೌಂಟರ್‌ ನಡೆದಾಗ ವಂಜಾರ ಗುಜರಾತ್ ಎಟಿಎಸ್‌ನ ಮುಖ್ಯಸ್ಥರಾಗಿದ್ದರು. 2007ರಲ್ಲಿ ಬಂಧಿತರಾಗಿದ್ದ ಅವರು 7 ವರ್ಷಗಳ ಕಾಲ ಜೈಲುವಾಸ ಅನುಭವಿಸಿ ನಂತರ ಬಿಡುಗಡೆಯಾದರು.

‘ಗುಜರಾತ್ ಪೊಲೀಸರು ಮತ್ತು ರಾಷ್ಟ್ರವಿರೋಧಿ ಪಡೆಗಳು ನನ್ನ ವಿರುದ್ಧ ಆರೋಪಿಸಿದ್ದ ಎಲ್ಲಾ ಎನ್‌ಕೌಂಟರ್ ಪ್ರಕರಣಗಳಲ್ಲಿ ನ್ಯಾಯಾಂಗದಿಂದ ನಾನು ಕ್ಲೀನ್ ಚೀಟ್ ಪಡೆದಿದ್ದೇನೆ.ಸೆಪ್ಟೆಂಬರ್ 29, 2007ರಿಂದ ಐಜಿಪಿಯಾಗಿ ನನಗೆ ಬಡ್ತಿ ನೀಡಲಾಗಿದೆ. ಇದಕ್ಕಾಗಿ ನಾನು ಭಾರತ ಸರ್ಕಾರ ಹಾಗೂ ಗುಜರಾತ್ ಸರ್ಕಾರ ಎರಡಕ್ಕೂ ಕೃತಜ್ಞನಾಗಿದ್ದೇನೆ’ ಎಂದು ಮಂಗಳವಾರ ರಾತ್ರಿ ಟ್ವೀಟ್ ಮಾಡಿರುವ ವಂಜಾರ, ಗೃಹ ಇಲಾಖೆಯ ಆದೇಶದ ಅಧಿಸೂಚನೆಯನ್ನೂ ಲಗತ್ತಿಸಿದ್ದಾರೆ.

ADVERTISEMENT

ವಂಜಾರ ಅವರಿಗೆ ಬಡ್ತಿ ನೀಡಿರುವ ಕುರಿತು ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನಿಖಿಲ್ ಭಟ್ ಬುಧವಾರ ಖಚಿತಪಡಿಸಿದ್ದಾರೆ.

1987ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ ವಂಜಾರಾ, ಡೆಪ್ಯುಟಿ ಐಜಿಪಿ ಹುದ್ದೆಯಿಂದ 2014ರ ಮೇ 31ರಂದು ನಿವೃತ್ತಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.