ADVERTISEMENT

ಅಕ್ರಮ ಹಣ ವರ್ಗಾವಣೆ ಪ್ರಕರಣ: ಅನಿಲ್ ದೇಶ್‌ಮುಖ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಪಿಟಿಐ
Published 6 ನವೆಂಬರ್ 2021, 14:30 IST
Last Updated 6 ನವೆಂಬರ್ 2021, 14:30 IST
ಅನಿಲ್ ದೇಶಮುಖ್, ಸಂಗ್ರಹ ಚಿತ್ರ
ಅನಿಲ್ ದೇಶಮುಖ್, ಸಂಗ್ರಹ ಚಿತ್ರ   

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರನ್ನು ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ಶನಿವಾರ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅನಿಲ್ ದೇಶಮುಖ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದೆ. ದೇಶಮುಖ್ ಅವರನ್ನು ನ.6ರವರೆಗೆ ಇ.ಡಿ ಕಸ್ಟಡಿಗೆ ಒಪ್ಪಿಸಲಾಗಿತ್ತು. ಶನಿವಾರ ದೇಶ್‌ಮುಖ್ ಅವರನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆಯ ಸಂದರ್ಭದಲ್ಲಿ, ಇ.ಡಿ ಹೆಚ್ಚಿನ ವಿಚಾರಣೆಗೆ 9 ದಿನಗಳವರೆಗೆ ಆರೋಪಿಯನ್ನು ತನ್ನ ಕಸ್ಟಡಿಗೆ ನೀಡುವಂತೆ ಕೋರಿತ್ತು, ಆದರೆ ನ್ಯಾಯಾಲಯ ಇದನ್ನು ನಿರಾಕರಿಸಿ, ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಈ ಪ್ರಕರಣದಲ್ಲಿ 12 ಗಂಟೆಗಳ ವಿಚಾರಣೆಯ ನಂತರ ಇ.ಡಿ ಕಳೆದ ಸೋಮವಾರ ಅನಿಲ್ ದೇಶಮುಖ್ ಅವರನ್ನು ಬಂಧಿಸಿತ್ತು.

ADVERTISEMENT

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ವೀರ್ ಸಿಂಗ್ ಮಾಡಿದ ₹100 ಕೋಟಿ ಲಂಚ ಪಡೆದ ಆರೋಪಗಳಿಗೆ ಸಂಬಂಧಿಸಿದಂತೆ ಸಿಬಿಐ ದೇಶಮುಖ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸುವ ಜತೆಗೆ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನೂ ದಾಖಲಿಸಿಕೊಂಡಿದೆ. ಅಲ್ಲದೆ, ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಆರೋಪದ ಮೇಲೆ ಎನ್‌ಸಿಪಿ ನಾಯಕ ದೇಶ್‌ಮುಖ್ ವಿರುದ್ಧ ಸಿಬಿಐ ಏಪ್ರಿಲ್ 21ರಂದು ಎಫ್‌ಐಆರ್ ದಾಖಲಿಸಿತ್ತು. ನಂತರ ದೇಶ್‌ಮುಖ್ ಮತ್ತು ಅವರ ಸಹಚರರ ವಿರುದ್ಧ ಇ.ಡಿ ತನಿಖೆ ಪ್ರಾರಂಭಿಸಿತು.

ದೇಶ್‌ಮುಖ್ ಅವರು ಗೃಹ ಸಚಿವರಾಗಿದ್ದಾಗ ಅಧಿಕಾರ ದುರುಪಯೋಗಪಡಿಸಿಕೊಂಡರು. ವಜಾಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಮೂಲಕ ಮುಂಬೈನ ವಿವಿಧ ಬಾರ್ ಮತ್ತು ರೆಸ್ಟೋರೆಂಟ್‌ಗಳಿಂದ ₹4.70 ಕೋಟಿ ಸಂಗ್ರಹಿಸಿದ್ದಾರೆ ಎಂಬುದು ಇ.ಡಿ ತನಿಖೆ ನಡೆಸುತ್ತಿರುವ ಪ್ರಕರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶ್‌ ಮುಖ್ ಅವರಲ್ಲದೆ, ಅವರ ಇಬ್ಬರು ಸಹಾಯಕರಾದ ಕುಂದನ್ ಶಿಂಧೆ ಮತ್ತು ಸಂಜೀವ್ ಪಲಾಂಡೆ ಅವರನ್ನು ಇ.ಡಿ ಬಂಧಿಸಿದೆ. ಸದ್ಯ ಇವರಿಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.