ADVERTISEMENT

ಬಿಡುಗಡೆ ತಪ್ಪಿಸಲು ಇನ್ಶೂರೆನ್ಸ್ ಅರೆಸ್ಟ್: ಕೇಜ್ರಿವಾಲ್ ಪರ ವಕೀಲರ ವಾದ

ದೆಹಲಿ ಹೈಕೋರ್ಟ್‌ ಎದುರು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್

ಪಿಟಿಐ
Published 17 ಜುಲೈ 2024, 19:53 IST
Last Updated 17 ಜುಲೈ 2024, 19:53 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ತಮ್ಮ ಬಂಧನ ಪ್ರಶ್ನಿಸಿ ಮತ್ತು ಮಧ್ಯಂತರ ಜಾಮೀನು ಕೋರಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಲ್ಲಿಸಿದ ಅರ್ಜಿಗಳ ಕುರಿತ ಆದೇಶವನ್ನು ದೆಹಲಿ ಹೈಕೋರ್ಟ್ ಬುಧವಾರ ಕಾಯ್ದಿರಿಸಿದೆ. 

ಮೊಹರಂ ಕಾರಣಕ್ಕೆ ರಜೆಯ ಹೊರತಾಗಿಯೂ, ಕೇಜ್ರಿವಾಲ್ ಮತ್ತು ಸಿಬಿಐ ಪರ ವಕೀಲರ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು, ಕೇಜ್ರಿವಾಲ್ ಅವರ ಅರ್ಜಿಗಳ ಕುರಿತ ಆದೇಶವನ್ನು ಕಾಯ್ದಿರಿಸಿದರು. 

ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, ‘ಕೇಜ್ರಿವಾಲ್ ಅವರು ಜೈಲಿನಿಂದ ಹೊರಹೋಗುವುದನ್ನು ತಡೆಯಲು ಸಿಬಿಐ ಅವರನ್ನು ‘ಇನ್ಶೂರೆನ್ಸ್ ಅರೆಸ್ಟ್’ (ಬಂಧನದಿಂದ ಮುಕ್ತನಾಗದಂತೆ ಒಂದಲ್ಲಾ ಮತ್ತೊಂದು ಪ್ರಕರಣದಲ್ಲಿ ತನಿಖೆಗೆ ಅಗತ್ಯವಾಗುವ ಆರೋಪಿ ಎಂದು ಪರಿಗಣಿಸಿ, ಆತನನ್ನು ಹಿಡಿದಿಟ್ಟುಕೊಂಡಿರುವುದು) ಮಾಡಿದೆ’ ಎಂದು ಹೇಳಿದರು. 

ADVERTISEMENT

‘ಇನ್ಶೂರೆನ್ಸ್ ಅರೆಸ್ಟ್ ದುರದೃಷ್ಟಕರ. ಕೇಜ್ರಿವಾಲ್ ವಿರುದ್ಧ ಕಠಿಣ ಕಾನೂನುಗಳಡಿ ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣದಲ್ಲಿ ಅವರ ಬಿಡುಗಡೆಗೆ ಮೂರು ಆದೇಶಗಳಿವೆ. ಈ ಪ್ರಕಾರ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬಹುದು. ಆದರೆ, ಅದನ್ನು ತಡೆಯಲು ಅವರನ್ನು ಸಿಬಿಐ ಬಂಧಿಸಿದೆ’ ಎಂದು ವಿವರಿಸಿದರು. 

‘ಕೇಜ್ರಿವಾಲ್ ಅವರೇನೂ ಭಯೋತ್ಪಾದಕರಲ್ಲ. ಅವರು ದೆಹಲಿಯ ಮುಖ್ಯಮಂತ್ರಿ’ ಎಂದ ಸಿಂಘ್ವಿ ಅವರು, ‘ಕಾನೂನು ಪ್ರಕಾರ ಕೇಜ್ರಿವಾಲ್ ಅವರ ಬಂಧನವು ಕಡ್ಡಾಯವಲ್ಲ. ಅವರು ಜಾಮೀನಿನ ಮೇರೆಗೆ ಬಿಡುಗಡೆಗೆ ಅರ್ಹರಾಗಿದ್ದಾರೆ’ ಎಂದು ಪ್ರತಿಪಾದಿಸಿದರು. 

ಇದಕ್ಕೆ ಪ್ರತಿವಾದ ಮಂಡಿಸಿದ ಸಿಬಿಐ ಪರ ವಕೀಲ ಡಿ.ಪಿ. ಸಿಂಗ್, ಕೇಜ್ರಿವಾಲ್ ಅವರು ತಮ್ಮ ಬಂಧನ ವಿರೋಧಿಸಿ ಹಾಗೂ ತಮಗೆ ಜಾಮೀನು ನೀಡಬೇಕೆಂಬ ಎರಡು ಅರ್ಜಿಗಳನ್ನು ಬಲವಾಗಿ ವಿರೋಧಿಸಿದರು. ಅಲ್ಲದೆ, ಕೇಜ್ರಿವಾಲ್ ಅವರ ಬಂಧನವು ‘ಇನ್ಶೂರೆನ್ಸ್‌ ಅರೆಸ್ಟ್’ ಎಂಬುದನ್ನು ಸಮರ್ಥಿಸಲಾಗದು ಎಂದು ಹೇಳಿದರು. 

ಜೂನ್ 26ರಂದು ಸಿಬಿಐನಿಂದ ಬಂಧನವಾಗಿರುವ ಕೇಜ್ರಿವಾಲ್ ಅವರು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಅವರನ್ನು ತಿಹಾರ್ ಕಾರಾಗೃಹದಲ್ಲಿ ಇಡಲಾಗಿದೆ. 

ಮತ್ತೊಂದೆಡೆ, ಕೇಜ್ರಿವಾಲ್ ಅವರು ಜಾಮೀನು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜುಲೈ 29ಕ್ಕೆ ನಿಗದಿಪಡಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.