ADVERTISEMENT

ನ್ಯಾಯಕ್ಕಾಗಿ ಪ್ರಧಾನಿಗೆ ಸುಶಾಂತ್‌ ಸಿಂಗ್ ರಜಪೂತ್ ಸಹೋದರಿ ಶ್ವೇತಾ ಮನವಿ

ಬಾಲಿವುಡ್‌ ನಟ ಆತ್ಮಹತ್ಯೆ ಪ್ರಕರಣ

ಪಿಟಿಐ
Published 1 ಆಗಸ್ಟ್ 2020, 9:08 IST
Last Updated 1 ಆಗಸ್ಟ್ 2020, 9:08 IST
 ಶ್ವೇತಾ ಸಿಂಗ್ ಕೀರ್ತಿ (ಚಿತ್ರ: ಟ್ವಿಟರ್‌ ಖಾತೆಯಿಂದ)
 ಶ್ವೇತಾ ಸಿಂಗ್ ಕೀರ್ತಿ (ಚಿತ್ರ: ಟ್ವಿಟರ್‌ ಖಾತೆಯಿಂದ)   

ಮುಂಬೈ: ಬಾಲಿವುಡ್‌ ನಟ ಸುಶಾಂತ್ ಸಿಂಗ್‌ ಆತ್ಮಹತ್ಯೆ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಈಗ ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಪ್ರಧಾನಿಯವರಿಗೆ ಪತ್ರ ಬರೆದು, ‘ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಿ, ನಮಗೆ ನ್ಯಾಯಕೊಡಿಸಿ‘ ಎಂದು ಮನವಿ ಮಾಡಿದ್ದಾರೆ.

ಶ್ವೇತಾ ಅವರು ಪ್ರಧಾನಿಯವರಿಗೆ ಬರೆದಿರುವ ಈ ಪತ್ರವನ್ನು ತಮ್ಮ ಸಾಮಾಜಿಕ ಜಾಲತಾಣವೊಂದರ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ‌

ಪತ್ರದಲ್ಲಿ, ‘ನಾವೊಂದು ಸಾಧಾರಣ ಕುಟುಂಬದ ಹಿನ್ನೆಲೆಯುಳ್ಳವರು. ನನ್ನ ಸಹೋದರ ಬಾಲಿವುಡ್‌ ಪ್ರವೇಶಿಸಿದಾಗ ಅವನಿಗೆ ಯಾವ ಗಾಡ್‌ಫಾದರ್ ಇರಲಿಲ್ಲ. ಈಗಲೂ ಇಲ್ಲ. ನನ್ನ ಮನವಿ ಇಷ್ಟೇ; ತಕ್ಷಣ ಈ ಪ್ರಕರಣವನ್ನು ಕೂಲಂಕಶವಾಗಿ ಪರಿಶೀಲಿಸಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷಿ ನಾಶಕ್ಕೆ ಅವಕಾಶ ಕೊಡಬೇಡಿ. ಸತ್ಯಕ್ಕೆ ಗೆಲುವು ಸಿಗಲಿ. ನಮ್ಮ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಿ. ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ‘ ಎಂದು ವಿವರಿಸಿದ್ದಾರೆ.

ADVERTISEMENT

ಶ್ವೇತಾ ಅವರ ಈ ಪೋಸ್ಟ್‌ ಕುರಿತು ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿರುವ ನಟಿ ಅಂಕಿತಾ ಲೋಖಂಡೆ, ‘ಸುಶಾಂತ್ ಸಾವಿನ ಹಿಂದಿನ ಕಾರಣವನ್ನು ತಿಳಿದುಕೊಳ್ಳಬೇಕೆಂದು ಅವರ ಕುಟುಂಬ ಬಯಸಿದೆ. ನಾನು ಸಾವಿಗೆ ಕಾರಣ ತಿಳಿಯಬೇಕಿದೆ. ಇಂಥ ಸಂದರ್ಭದಲ್ಲಿ ನಾನು ಸುಶಾಂತ್ ಕುಟುಂಬದ ಪರ ನಿಲ್ಲುತ್ತೇನೆ‘ ಎಂದು ಹೇಳಿದ್ದಾರೆ.

ಜೂನ್ 14ರಂದು ಮುಂಬೈನ ಬಾಂದ್ರಾದ ತಮ್ಮ ನಿವಾಸದಲ್ಲಿ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣ ದೇಶದ ಗಮನ ಸೆಳೆದಿತ್ತು. ನಂತರ ಈ ಸಾವಿನ ಪ್ರಕರಣ ಹಲವು ತಿರುವು ಪಡೆದುಕೊಂಡಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಅವರ ತಂದೆ ಕೃಷ್ಣ ಕಿಶೋರ್ ಸಿಂಗ್ ಅವರು ನಟಿ ರಿಯಾ ಚಕ್ರವರ್ತಿ ವಿರುದ್ಧ ಪಟ್ನಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ರಿಯಾ ವಿರುದ್ಧ ಎಫ್‌ಐಆರ್‌ ಕೂಡ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.