ADVERTISEMENT

ಪಾಕ್‌ ಜೊತೆ ನಂಟು: ಹರಿಯಾಣ ಪೊಲೀಸರಿಂದ ನಾಲ್ವರು ಶಂಕಿತ ಭಯೋತ್ಪಾದಕರ ಬಂಧನ

ಪಿಟಿಐ
Published 5 ಮೇ 2022, 11:43 IST
Last Updated 5 ಮೇ 2022, 11:43 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ಚಂಡೀಗಡ: ಪಾಕಿಸ್ತಾನದೊಂದಿಗೆ ನಂಟಿರುವ, ಶಂಕಿತ ನಾಲ್ವರು ಉಗ್ರರನ್ನು ಹರಿಯಾಣದ ಕರ್ನಾಲ್‌ ಬಳಿಯ ಬಸ್ತಾಡಾದ ಟೋಲ್‌ಪ್ಲಾಜ್‌ದಲ್ಲಿ ಬಂಧಿಸಲಾಗಿದೆ. ಬಂಧಿತರಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು, ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

‘ಪಂಜಾಬ್ ಹಾಗೂ ಹರಿಯಾಣ ಪೊಲೀಸರು ಜಂಟಿ ಕಾರ್ಯಾಚರಣೆ ನಾಲ್ವರು ಉಗ್ರರನ್ನು ಬಂಧಿಸಿದ್ದಾರೆ’ ಎಂದು ಹರಿಯಾಣ ಡಿಜಿಪಿ ಪಿ.ಕೆ.ಅಗ್ರವಾಲ್‌ ಹೇಳಿದ್ದಾರೆ.

‘ಪ್ರಾಥಮಿಕ ತನಿಖೆಯಲ್ಲಿ ಕೆಲ ಸಂಗತಿಗಳು ಗೊತ್ತಾಗಿವೆ. ಪಂಜಾಬ್‌ನ ಫಿರೋಜ್‌ಪುರದ ಜಮೀನುಗಳಲ್ಲಿ ಪಾಕಿಸ್ತಾನದಿಂದ ತಂದಿದ್ದ ಶಸ್ತ್ರಾಸ್ತ್ರಗಳನ್ನು ಡ್ರೋನ್‌ ಮೂಲಕ ಹಾಕಲಾಗಿದೆ ಎಂಬುದಾಗಿ ಬಂಧಿತರು ಹೇಳಿದ್ದಾರೆ. ಈ ಬಗ್ಗೆ ವಿಸ್ತೃತ ತನಿಖೆಯ ಅಗತ್ಯ ಇದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘ತಲಾ 2.5 ಕೆ.ಜಿ ತೂಕವಿರುವ ಮೂರು ಕಂಟೇನರ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳಲ್ಲಿ ಆರ್‌ಡಿಎಕ್ಸ್‌ ಇರುವ ಶಂಕೆ ಇದೆ. ಒಂದು ಪಿಸ್ತೂಲ್, 31 ಸುತ್ತು ಜೀವಂತ ಕ್ಯಾರ್ಟ್ರಿಡ್ಜ್‌ಗಳು, ₹ 1.3 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ’ ಎಂದು ಕರ್ನಾಲ್‌ ವಲಯ ಐಜಿಪಿ ಸತ್ಯೇಂದ್ರಕುಮಾರ್ ಗುಪ್ತಾ ತಿಳಿಸಿದ್ದಾರೆ.

ಬಂಧಿತರನ್ನು ಲೂಧಿಯಾನದ ಭೂಪಿಂದರ್‌ ಸಿಂಗ್‌, ಫಿರೋಜ್‌ಪುರದ ಗುರ್‌ಪ್ರೀತ್‌ ಸಿಂಗ್‌, ಪರ್ಮಿಂದರ್‌ ಸಿಂಗ್‌ ಹಾಗೂ ಅಮನ್‌ದೀಪ್‌ ಸಿಂಗ್‌ ಎಂದು ಗುರುತಿಸಲಾಗಿದೆ. ಬಂಧಿತರು ಈ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ಮಹಾರಾಷ್ಟ್ರದ ನಾಂದೇಡ್‌ ಹಾಗೂ ತೆಲಂಗಾಣದ ಆದಿಲಾಬಾದ್‌ಗೆ ಸಾಗಿಸುತ್ತಿದ್ದರು ಎಂದು ಕರ್ನಾಲ್‌ ಎಸ್ಪಿ ಗಂಗಾರಾಮ್ ಪೂನಿಯಾ ತಿಳಿಸಿದ್ದಾರೆ.

‘ಬಂಧಿತರು ಪಾಕಿಸ್ತಾನ ಮೂಲದ ಹರ್ವಿಂದರ್ ಸಿಂಗ್‌ ರಿಂಡಾ ಎಂಬ ವ್ಯಕ್ತಿಯ ಸಂಪರ್ಕದಲ್ಲಿದ್ದರು. ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಈ ವ್ಯಕ್ತಿ, ಶಸ್ತ್ರಾಸ್ತ್ರಗಳು, ಸ್ಫೋಟಕ ವಸ್ತುಗಳು ಹಾಗೂ ಡ್ರಗ್ಸ್‌ ಪೂರೈಕೆ ಮಾಡುತ್ತಾನೆ. ಅವುಗಳನ್ನು ತಲುಪಿಸಬೇಕಾದ ಸ್ಥಳಗಳ ಮಾಹಿತಿಯನ್ನು ಆ್ಯಪ್‌ ಮೂಲಕ ಬಂಧಿತರಿಗೆ ತಿಳಿಸುತ್ತಿದ್ದ’.

‘ಫಿರೋಜ್‌ಪುರ ಸಮೀಪದ ಜಮೀನುಗಳಲ್ಲಿ ಮೊದಲೇ ನಿಗದಿಪಡಿಸಿದ ಸ್ಥಳದಲ್ಲಿ ಡ್ರೋನ್‌ ಮೂಲಕ ಈ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳನ್ನು ಹರ್ವಿಂದರ್‌ ಸಿಂಗ್‌ ಬೀಳಿಸಿದ್ದ’ ಎಂದು ಹೇಳಿರುವ ಪೂನಿಯಾ, ‘ಬಂಧಿತರು ಯಾವ ಉಗ್ರ ಸಂಘಟನೆಗೆ ಸೇರಿದವರು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದರು.

‘ಪ್ರಮುಖ ಆರೋಪಿ ಗುರ್‌ಪ್ರೀತ್‌ ಸಿಂಗ್‌, ರಾಜವೀರ್‌ ಸಿಂಗ್‌ ಎಂಬಾತನನ್ನು ಈ ಮೊದಲು ಜೈಲಿನಲ್ಲಿ ಭೇಟಿಯಾಗಿದ್ದ. ರಾಜವೀರ್‌ ಸಿಂಗ್‌ ರಿಂಡಾನ ಸಹಚರ’ ಎಂದೂ ಅವರು ತಿಳಿಸಿದ್ದಾರೆ.

ಕರ್ನಾಲ್ ಬಳಿ ಟೋಲ್‌ಪ್ಲಾಜಾದಲ್ಲಿ ಬಂಧಿತರ ವಾಹನವನ್ನು ವಶಕ್ಕೆ ಪಡೆದ ನಂತರ, ಬಾಂಬ್‌ ನಿಷ್ಕ್ರಿಯ ದಳ ಹಾಗೂ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉನ್ನತ ಮಟ್ಟದ ತನಿಖೆಗಾಗಿ ಹರಿಯಾಣ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿದ್ದಾರೆ. ಬಂಧಿತರ ವಿರುದ್ಧ ಯುಎಪಿಎ ಹಾಗೂ ಶಸ್ತ್ರಾಸ್ತ್ರ ಮತ್ತು ಸ್ಫೋಟಕವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

‘ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ’ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್‌ ಹಾಗೂ ಗೃಹ ಸಚಿವ ಅನಿಲ್‌ ವಿಜ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.