ಮಹಾರಾಷ್ಟ್ರದ ರಾಜಭವನದಲ್ಲಿ ಎನ್‌ಸಿಪಿ ಮುಖಂಡ ಛಗನ್ ಭುಜಬಲ್ ಅವರು ಸಚಿವರಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. ಉಪಮುಖ್ಯಮಂತ್ರಿ ಅಜಿತ್ ಪವಾರ್, ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್, ಉಪಮುಖ್ಯಮಂತ್ರಿ ಏಕನಾಥ ಶಿಂದೆ ಇದ್ದಾರೆ ಪಿಟಿಐ ಚಿತ್ರ
-ಪಿಟಿಐ ಚಿತ್ರ
ಮುಂಬೈ: ಮಹಾರಾಷ್ಟ್ರದ ಎನ್‌ಸಿಪಿ ಮುಖಂಡ ಛಗನ್ ಭುಜಬಲ್ ಅವರು ಸಚಿವರಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು.
ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಐದು ತಿಂಗಳ ಬಳಿಕ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದು, ಭುಜಬಲ್ ಸೇರ್ಪಡೆಯಿಂದ ಸಚಿವರ ಸಂಖ್ಯೆ 39ಕ್ಕೆ ಏರಿದೆ.
ಫಡಣವೀಸ್ ಸಚಿವ ಸಂಪುಟದಲ್ಲಿ ಬಿಜೆಪಿ 19 ಸಚಿವರನ್ನು ಹೊಂದಿದ್ದರೆ, ಶಿವಸೇನೆ (ಶಿಂದೆ ಬಣ) 11 ಹಾಗೂ ಎನ್‌ಸಿಪಿ (ಅಜಿತ್ ಬಣ) 9 ಸಚಿವರನ್ನು ಹೊಂದಿದೆ.
ಉಪಮುಖ್ಯಮಂತ್ರಿಗಳಾದ ಅಜಿತ್ ಪವಾರ್, ಏಕನಾಥ ಶಿಂದೆ ಹಾಗೂ ಹಿರಿಯ ಮುಖಂಡರ ಉಪಸ್ಥಿತಿಯಲ್ಲಿ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ರಾಜಭವನದಲ್ಲಿ ಭುಜಬಲ್‌ಗೆ ಪ್ರಮಾಣವಚನ ಬೋಧಿಸಿದರು.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಫಡಣವೀಸ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಹಿಂದುಳಿದ ವರ್ಗದ ನಾಯಕರಾದ ಛಗನ್ ಭುಜಬಲ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರಲಿಲ್ಲ.
ಸರಪಂಚ್ ಸಂತೋಷ್ ದೇಶಮುಖ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್‌ನಲ್ಲಿ ಧನಂಜಯ ಮುಂಡೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಭುಜಬಲ್ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.
‘ಮರಾಠ ಮೀಸಲಾತಿ ವಿರೋಧಿಯನ್ನು ಸಚಿವರನ್ನಾಗಿ ಮಾಡಿರುವುದಕ್ಕೆ’ ಹೋರಾಟಗಾರ ಮನೋಜ್ ಜರಾಂಗೆ ಅವರು ಎನ್‌ಸಿಪಿ ವರಿಷ್ಠ ಅಜಿತ್ ಪವಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಮರಾಠ ಹೋರಾಟಗಾರರನ್ನು ವ್ಯವಸ್ಥಿತವಾಗಿ ತುಳಿಯುತ್ತಿದ್ದಾರೆ’ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.