ADVERTISEMENT

ಲೈಂಗಿಕ ದೌರ್ಜನ್ಯ: ದೋಷಿಯನ್ನು ರಕ್ಷಿಸಲು ವೃದ್ಧನ ವಿರುದ್ಧ ಆರೋಪ ಮಾಡಿದ್ದ ಬಾಲಕಿ!

ಅರ್ಜುನ್ ರಘುನಾಥ್
Published 1 ಆಗಸ್ಟ್ 2025, 7:29 IST
Last Updated 1 ಆಗಸ್ಟ್ 2025, 7:29 IST
<div class="paragraphs"><p>ಜೋಸೆಫ್</p></div>

ಜೋಸೆಫ್

   

(ಚಿತ್ರ –ಡೆಕ್ಕನ್ ಹೆರಾಲ್ಡ್)

ತಿರುವನಂತಪುರ: ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ನಕಲಿ 'ಪೋಕ್ಸೊ' ಪ್ರಕರಣದಲ್ಲಿ ಅಲಪ್ಪುಳದ 75 ವರ್ಷದ ವ್ಯಕ್ತಿಯೊಬ್ಬರು 9 ತಿಂಗಳು ಸೆರೆವಾಸ ಅನುಭವಿಸಿದ್ದಾರೆ. ಆದರೆ, ನಿಜವಾದ ದೋಷಿಯನ್ನು ರಕ್ಷಿಸುವುದಕ್ಕಾಗಿ ಸಂತ್ರಸ್ತ ಬಾಲಕಿಯೇ ಸುಳ್ಳು ಆರೋಪ ಮಾಡಿದ್ದಳು ಎಂಬುದು ತಡವಾಗಿ ಬಹಿರಂಗವಾಗಿತ್ತು.

ADVERTISEMENT

ಜೈಲು ಶಿಕ್ಷೆ ಅನುಭವಿಸಿದ ವ್ಯಕ್ತಿಯ ಹೆಸರು ಜೋಸೆಫ್‌. ಜಿಲ್ಲೆಯ ಶಾಲೆಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಅವರ ವಿರುದ್ಧ ವಿದ್ಯಾರ್ಥಿನಿಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದರು.

'ಆಘಾತವಾಗಿತ್ತು'
ಬಾಲಕಿಯ ದೂರಿನ ಆಧಾರದಲ್ಲಿ ಜೋಸೆಫ್‌ ಅವರನ್ನು 2022ರ ನವೆಂಬರ್‌ನಲ್ಲಿ ಬಂಧಿಸಿ, ಜೈಲಿಗಟ್ಟಲಾಗಿತ್ತು.

ಈ ಕುರಿತು 'ಡೆಕ್ಕನ್ ಹೆರಾಲ್ಡ್‌' ಜೊತೆ ಮಾತನಾಡಿರುವ ಜೋಸೆಫ್‌, 'ಆ ಹುಡುಗಿ ಮತ್ತು ಅವರ ಕುಟುಂಬದವರು ನನಗೆ ಚೆನ್ನಾಗಿ ಗೊತ್ತು. ಹಾಗಾಗಿ, ಆರೋಪದಿಂದ ತೀವ್ರ ಆಘಾತವಾಗಿತ್ತು. ಬಾಲಕಿಯ ಕುಟುಂಬದವರು ಬಡತನದ ಹಿನ್ನಲೆಯವರು. ಈಗಲೂ ನಾನು ಆ ಹುಡುಗಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವಳು ನನ್ನ ಮೊಮ್ಮಕ್ಕಳಿಗಿಂತಲೂ ಸಣ್ಣವಳು' ಎಂದು ಹೇಳಿದ್ದಾರೆ.

ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ತಮ್ಮ ಘನತೆಗೆ ಈ ಪ್ರಕರಣವು ಚ್ಯುತಿ ತಂದಿದ್ದರೂ, ಬಾಲಕಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಆಲೋಚನೆ ಇಲ್ಲ ಎಂದು ಜೋಸೆಫ್‌ ಸ್ಪಷ್ಟಪಡಿಸಿದ್ದಾರೆ.

'ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ತನ್ನ ಹೇಳಿಕೆ ಬದಲಿಸಿಕೊಂಡ ನಂತರ ಬಾಲಕಿಯು ನನ್ನ ಬಳಿ ಕ್ಷಮೆಯಾಚಿಸಿ, ಕಣ್ಣೀರು ಹಾಕಿದಳು. ನಿಜವಾದ ದೋಷಿಯ ಬಲವಂತದಿಂದ ಆಕೆ ಸುಳ್ಳು ಹೇಳಿಕೆ ನೀಡಿದ್ದಿರಬಹುದು. ಸಂಕಷ್ಟದ ಸಮಯದಲ್ಲಿ ನನ್ನ ಕುಟುಂಬ, ಆಪ್ತ ಸ್ನೇಹಿತರು ಹಾಗೂ ಸಂಬಂಧಿಕರು ನನ್ನೊಂದಿಗೆ ನಿಂತರು. ಆ ಬಗ್ಗೆ ಸಂತಸವಿದೆ' ಎಂದು ಹೇಳಿಕೊಂಡಿದ್ದಾರೆ.

ಬಾಲಕಿಯು ನ್ಯಾಯಾಲಯದಲ್ಲಿ ಹೇಳಿಕೆ ಬದಲಿಸಿಕೊಂಡ ನಂತರ 2023ರ ಜುಲೈನಲ್ಲಿ ಜೋಸೆಫ್‌ ಅವರಿಗೆ ಜಾಮೀನು ನೀಡಲಾಯಿತು. ಅಲಪ್ಪುಳ ಪೋಕ್ಸೊ ನ್ಯಾಯಾಲಯವು ಮಂಗಳವಾರವಷ್ಟೇ (ಜುಲೈ 26ರಂದು) ಜೋಸೆಫ್‌ ಅವರನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿದೆ.

ಜೋಸೆಫ್‌ ಪರ ವಾದಿಸಿದ್ದ ವಕೀಲ ಪಿ.ಪಿ. ಬೈಜು ಅವರು, ಇದೊಂದೇ ಪ್ರಕರಣವಲ್ಲ. ಕೆಲವು ವರ್ಷಗಳ ಹಿಂದೆ ಬಾಲಕಿಯೊಬ್ಬಳು ತನ್ನ ತಂದೆಯ ವಿರುದ್ಧವೇ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಳು. ವಿಚಾರಣೆ ಬಳಿಕ ಅದೊಂದು ಸುಳ್ಳು ಪ್ರಕರಣ. ಆರೋಪಿಯು ಮದ್ಯ ಸೇವನೆ ನಿಲ್ಲಿಸುವಂತೆ ಮಾಡಲು ಕುಟುಂಬದವರೇ ಮಾಡಿದ್ದ ನಾಟಕ ಎಂಬುದು ಬಯಲಾಗಿತ್ತು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.