ADVERTISEMENT

ರ‍್ಯಾಗಿಂಗ್‌ಗೆ ಕಡಿವಾಣ: ಕಠಿಣ ಕಾಯ್ದೆಗೆ ಮಹಾರಾಷ್ಟ್ರ ಚಿಂತನೆ

ಪಿಟಿಐ
Published 18 ಜೂನ್ 2019, 18:41 IST
Last Updated 18 ಜೂನ್ 2019, 18:41 IST

ಮುಂಬೈ: ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಕಿರುಕುಳ (ರ‍್ಯಾಗಿಂಗ್‌) ನೀಡುವ ಪ್ರವೃತ್ತಿಗೆ ಕಡಿವಾಣ ಹಾಕಲು ಮುಂದಾಗಿರುವ ಮಹಾರಾಷ್ಟ್ರ ಸರ್ಕಾರ, ರ‍್ಯಾಗಿಂಗ್‌ ವಿರೋಧಿ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಲು ನಿರ್ಧರಿಸಿದೆ.

ವಿಧಾನಸಭೆಯಲ್ಲಿ ಮಂಗಳವಾರ ಬಿಜೆಪಿಯ ಶಾಸಕ ಅತುಲ್‌ ಭಟ್ಕಳ್ಕರ್‌ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಗೃಹ ಸಚಿವ ರಂಜಿತ್‌ ಪಾಟೀಲ, ‘ರ‍್ಯಾಗಿಂಗ್‌ ನಿಯಂತ್ರಣಕ್ಕಾಗಿ ಈಗಾಗಲೇ ಕಾನೂನು ಜಾರಿಯಲ್ಲಿದ್ದರೂ, ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಇತ್ತೀಚೆಗೆ ಕಿರಿಯ ವೈದ್ಯೆ ಪಾಯಲ್‌ ತಡ್ವಿ ಆತ್ಮಹತ್ಯೆ ಮಾಡಿಕೊಳ್ಳಲು ರ‍್ಯಾಗಿಂಗ್‌ ಕಾರಣ ಎಂಬ ಆರೋಪವಿದೆ’ ಎಂದರು.

ಶಾಸಕ ಭಟ್ಕಳ್ಕರ್, ‘ವೈದ್ಯೆ ತಡ್ವಿ ಆತ್ಮಹತ್ಯೆ ಪ್ರಕರಣದ ಆರೋಪಿಗಳಾದ ಡಾ.ಹೇಮಾ ಅಹುಜಾ, ಡಾ.ಭಕ್ತಿ ಮೆಹ್ರ್‌ ಹಾಗೂ ಡಾ.ಅಂಕಿತಾ ಖಂಡೇಲ್‌ವಾಲಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪಾಟೀಲ, ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಅವರ ವಿರುದ್ಧ ಕಠಿಣ ಕ್ರಮ ಖಚಿತ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.