ADVERTISEMENT

ಪುಲ್ವಾಮ ಸ್ಫೋಟದ ಹಿಂದೆಯೇ ಸುಳ್ಳು ಸುದ್ದಿಗಳ ಸ್ಫೋಟ!

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 16:31 IST
Last Updated 15 ಫೆಬ್ರುವರಿ 2019, 16:31 IST
   

ಬೆಂಗಳೂರು: ಯಾವುದೇ ದುರ್ಘಟನೆ ನಡೆದರೂ ಅದನ್ನು ರಾಜಕೀಯಗೊಳಿಸುವ ಪ್ರಕ್ರಿಯೆಯೊಂದು ಚಾಲನೆಯಲ್ಲಿರುವಂತೆಯೇ ಅದರ ಕುರಿತಂತೆ ಸುಳ್ಳು ಸುದ್ದಿಗಳನ್ನು ಹರಡುವ ಪ್ರಕ್ರಿಯೆಯೂ ಆರಂಭವಾಗಿಬಿಡುತ್ತದೆ. ಪುಲ್ವಾಮದಲ್ಲಿ ನಡೆದ ಆತ್ಮಹತ್ಯಾ ಬಾಂಬರ್ ದಾಳಿಯ ವಿಷಯದಲ್ಲೂ ಇದು ಸಂಭವಿಸಿದೆ. ಬೂಮ್ ಲೈವ್ ಜಾಲತಾಣ ವೈರಲ್ ಆಗಿರುವ ಮೂರು ಸುಳ್ಳು ಸುದ್ದಿಗಳ ಹಿಂದಿನ ವಾಸ್ತವವನ್ನು ಬಯಲಿಗೆ ಎಳೆದಿದೆ.

ಈ ಚಿತ್ರ ಪುಲ್ವಾಮ ದಾಳಿಯದ್ದಲ್ಲ

ಪುಲ್ವಾನ ದಾಳಿಯಲ್ಲಿ ಮೃತಪಟ್ಟ ಯೋಧನ ಕಳೇಬರದ ಸುತ್ತ ನೆರೆದಿರುವ ಸಹೋದ್ಯೋಗಿಗಳು ಎಂದು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ಚಿತ್ರ ಕಾಶ್ಮೀರದ್ದೇ ಅಲ್ಲ. ಈ ಚಿತ್ರ ಈ ಹಿಂದೆಯೂ ಪ್ರಕಟವಾಗಿತ್ತು. 2017ರಲ್ಲಿ ತವಾಂಗ್‌ನಲ್ಲಿ ಸಂಭವಿಸಿದ ಭಾರತೀಯ ವಾಯು ಸೇನೆಯ ವಿಮಾನ ಅಪಘಾತದ ಚಿತ್ರವಿದು.

ADVERTISEMENT

ಸೈನಿಕರ ದೇಹಗಳನ್ನು ಕಾರ್ಡ್‌ಬೋರ್ಡ್ ಬಾಕ್ಸ್‌ನಲ್ಲಿ ತರಲಾಗಿತ್ತು ಎಂಬ ಕಾರಣಕ್ಕೆ ವಿವಾದ ಸೃಷ್ಟಿಯಾಗಿತ್ತು. ಸಮುದ್ರ ಮಟ್ಟದಿಂದ 17,00 ಅಡಿ ಎತ್ತರದಲ್ಲಿರುವ ತವಾಂಗ್‌ನಲ್ಲಿ ಮೃತದೇಹಗಳನ್ನು ತರಲು ಬೇಕಿರುವ ಚೀಲಗಳು ಲಭ್ಯವಿರಲಿಲ್ಲ. ಹಾಗಾಗಿ ಈ ಬಗೆಯ ಪೆಟ್ಟಿಗೆಗಳನ್ನು ಬಳಸಬೇಕಾಯಿತು ಎಂದು ವಾಯುಸೇನೆ ಸ್ಪಷ್ಟ ಪಡಿಸಿತ್ತು. ಆ ಚಿತ್ರಗಳನ್ನು ಈಗ ಪುಲ್ವಾನ ಭಯೋತ್ಪಾದಕ ದಾಳಿಯಲ್ಲಿ ಮೃತರಾದ ಯೋಧರ ಚಿತ್ರವೆಂದು ಹಂಚಿಕೊಳ್ಳಲಾಗುತ್ತದೆ.

ರಾಹುಲ್ ಜೊತೆಗಿರುವುದು ಆತ್ಮಹತ್ಯಾ ಬಾಂಬರ್ ಅಲ್ಲ

ಪುಲ್ವಾನ ದಾಳಿ ನಡೆಸಿದ ಆತ್ಮಹತ್ಯಾ ಬಾಂಬರ್ ಆದಿಲ್ ಅಹಮದ್ ರಾಹುಲ್ ಗಾಂಧಿಯ ಜೊತೆಗೆ ಇರುವ ಚಿತ್ರವ್ಯೊಂದು ವೈರಲ್ ಆಗಿದೆ. ಇದೊಂದು ನಕಲಿ ಚಿತ್ರ ಎಂಬುದನ್ನು ಬೂಮ್ ಲೈವ್ ಪತ್ತೆ ಹಚ್ಚಿದೆ. 2014ರ ಫೆಬ್ರವರಿಯಲ್ಲಿ ಉತ್ತರ ಪ್ರದೇಶದ ಬರ್ಬಾಂಕಿಯಲ್ಲಿರುವ ಹಾಜಿ ವಾರಿಸ್ ಆಲಿ ಶಾ ದರ್ಗಾಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದಾಗ ತೆಗೆದ ಚಿತ್ರವನ್ನು ಫೋಟೋಶಾಪ್ ಮಾಡುವ ಮೂಲಕ ಈ ಚಿತ್ರವನ್ನು ಸೃಷ್ಟಿಸಲಾಗಿದೆ.

ಪ್ರಿಯಾಂಕ ನಗಲಿಲ್ಲ

ಪುಲ್ವಾಮ ದಾಳಿಯ ಕುರಿತ ಪತ್ರಿಕಾಗೋಷ್ಠಿಯಲ್ಲಿ ಪ್ರಿಯಾಂಕ ಗಾಂಧಿ ನಗುತ್ತಿದ್ದರು ಎಂಬುದು ಮತ್ತೊಂದು ವೈರಲ್ ಪೋಸ್ಟ್. ಟ್ವಿಟ್ಟರ್‌ನಲ್ಲಿ ಅನೇಕರು ಹಂಚಿಕೊಂಡಿರುವ ಈ ವಿಡಿಯೋವನ್ನು ಕೃತಕವಾಗಿ ಸೃಷ್ಟಿಸಲಾಗಿದೆ. ಪತ್ರಿಕಾಗೋಷ್ಠಿಯ ವಿಡಿಯೋ ಚಿತ್ರಿಕೆಯನ್ನು ತಿದ್ದಿ ಈ ಕೆಲಸ ಮಾಡಲಾಗಿದೆ ಎಂಬುದನ್ನು ಬೂಮ್ ಲೈವ್ ಪತ್ತೆ ಹಚ್ಚಿದೆ.

ಈ ಚಿತ್ರಿಕೆಯಲ್ಲಿ ಪ್ರಿಯಾಂಕ 'ಬಹುತ್ ಬಹುತ್ ಧನ್ಯವಾದ್' ಎಂದು ಹೇಳಿದ್ದಾರೆ. ಈ ಪತ್ರಿಕಾಗೋಷ್ಠಿಯ ಪೂರ್ಣ ವಿಡಿಯೋವನ್ನು ಪರಿಶೀಲಿಸಿದಾಗ ಪ್ರಿಯಾಂಕ ಎಲ್ಲಿಯೂ ನಕ್ಕಿರುವುದು ಕಾಣಿಸಿಲ್ಲ. ವಿಡಿಯೋದ ವೇಗವನ್ನು ಕಡಿಮೆ ಮಾಡುವ ಮೂಲಕ ಅವರು ನಗುವನ್ನು ಸೃಷ್ಟಿಸಲಾಗಿದೆ. ಕೇವಲ 54 ಸೆಕೆಂಡ್‌ಗಳ ವಿಡಿಯೋವನ್ನಷ್ಟೇ ಕತ್ತರಿಸಿ ಈ ಕೃತ್ಯವನ್ನೆಸಗಲಾಗಿದೆ.

ಈ ವಿಡಿಯೋವನ್ನು ಹಂಚಿಕೊಂಡಿರುವ ಅಂಕುರ್ ಸಿಂಗ್‌ಗೆ ಈ ಹಿಂದೆಯೂ ಇಂಥದ್ದೇ ಕೃತ್ಯಗಳನ್ನು ನಡೆಸಿದ ಕುಖ್ಯಾತಿ ಇದೆ. ಈತನ ಟ್ವಿಟ್ಟರ್ ಖಾತೆ ಒಮ್ಮೆ ಅಮಾನತಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರೂ ಈತನನ್ನು ಟ್ವಿಟ್ಟರ್‌ನಲ್ಲಿ ಫಾಲೋ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.