
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ನೌಗಾಮ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕವಾಗಿ ಭಾರಿ ಸ್ಫೋಟ ಸಂಭವಿಸಿ, 9 ಪೊಲೀಸರು ಮೃತಪಟ್ಟಿದ್ದಾರೆ. ಅವಘಡದಲ್ಲಿ 32 ಮಂದಿ ಗಾಯಗೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಶಾಂತ್ ಲೋಖಂಡೆ ಅವರು, ‘ಸ್ಫೋಟಕ್ಕೆ ಕಾರಣ ಏನೆಂದು ತನಿಖೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.
‘ವೈಟ್ ಕಾಲರ್ ಭಯೋತ್ಪಾದನೆ ಮಾದರಿ ಕುರಿತ ತನಿಖೆ ಸಂದರ್ಭದಲ್ಲಿ ಕಲೆಹಾಕಲಾಗಿದ್ದ ಅಪಾರ ಪ್ರಮಾಣದ ಸ್ಫೋಟಕ ತಯಾರಿಕಾ ಸಾಮಗ್ರಿಗಳು ಮತ್ತು ರಾಸಾಯನಿಕಗಳನ್ನು ನೌಗಾಮ್ ಠಾಣೆಯ ಆವರಣದ ತೆರೆದ ಪ್ರದೇಶದಲ್ಲಿ ಸಂಗ್ರಹಿಸಿಡಲಾಗಿತ್ತು. ನಿಗದಿತ ಕಾರ್ಯವಿಧಾನದ ಭಾಗವಾಗಿ ವಶಪಡಿಸಿಕೊಂಡಿದ್ದ ಸ್ಫೋಟಕಗಳ ಮಾದರಿಯನ್ನು ವಿಧಿವಿಜ್ಞಾನ ಮತ್ತು ರಾಸಾಯನಿಕ ಪರೀಕ್ಷೆಗೆ ಕಳುಹಿಸಬೇಕಿತ್ತು. ಕಳೆದ ಎರಡು ದಿನಗಳಿಂದ ತಂಡವು ಮಾದರಿ ಸಂಗ್ರಹ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿತ್ತು. ತಜ್ಞರ ಮೇಲ್ವಿಚಾರಣೆಯಲ್ಲಿ ಬಹಳ ಎಚ್ಚರಿಕೆಯಿಂದಲೇ ಕಾರ್ಯನಿರ್ವಹಿಸಲಾಗುತ್ತಿತ್ತು. ಆದರೆ ದುರದೃಷ್ಟವಶಾತ್ ಶುಕ್ರವಾರ ರಾತ್ರಿ 11.20ರ ಸುಮಾರಿಗೆ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿದೆ’ ಎಂದು ತಿಳಿಸಿದರು.
ಗಾಯಗೊಂಡವರ ಪೈಕಿ 27 ಮಂದಿ ಪೊಲೀಸ್ ಸಿಬ್ಬಂದಿ, ಇಬ್ಬರು ಕಂದಾಯ ಅಧಿಕಾರಿಗಳು ಮತ್ತು ಮೂವರು ನಾಗರಿಕರು ಸೇರಿದ್ದಾರೆ ಎಂದರು.
ಸ್ಫೋಟದಿಂದ ಪೊಲೀಸ್ ಠಾಣೆಗೆ ಮತ್ತು ಸಮೀಪದ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ತಿಳಿಸಿದರು.
‘ಫರೀದಾಬಾದ್‌ನಲ್ಲಿ ವಶಪಡಿಸಿಕೊಂಡವು’
ನವೆಂಬರ್ 9 ಮತ್ತು 10ರಂದು ಫರೀದಾಬಾದ್‌ನಲ್ಲಿ ಶೋಧ ನಡೆಸಿ ಸ್ಫೋಟಕಗಳನ್ನು ಜಪ್ತಿ ಮಾಡಲಾಗಿತ್ತು. ಬಳಿಕ ಅದನ್ನು ಟಾಟಾ 407 ಪಿಕಪ್ ಟ್ರಕ್‌ನಲ್ಲಿ ಕಾಶ್ಮೀರಕ್ಕೆ ತರಲಾಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೌಗಾಮ್ ಪೊಲೀಸ್ ಠಾಣೆಯಲ್ಲಿಯೇ ಪ್ರಕರಣ ದಾಖಲಾಗಿದ್ದುದರಿಂದ ನಿಯಮಗಳ ಅನ್ವಯ ಸ್ಫೋಟಕಗಳನ್ನು ಅಲ್ಲಿಗೆ ತೆಗೆದುಕೊಂಡು ಹೋಗಲಾಗಿತ್ತು ಎಂದು ಹೇಳಿದ್ದಾರೆ.
ಬಾದಾಮಿ ಬಾಗ್ ದುರಂತದ ನೆನಪು
ಶ್ರೀನಗರ: ನೌಗಾಮ್ ಠಾಣೆಯಲ್ಲಿ ಸಂಭವಿಸಿದ ಸ್ಫೋಟವು, 1994ರಲ್ಲಿ ಕಾಶ್ಮೀರದ ಬಾದಾಮಿ ಬಾಗ್ ಕಂಟೋನ್ಮೆಂಟ್‌ನಲ್ಲಿನ ಭಾರತೀಯ ಸೇನೆಯ ಶಸ್ತ್ರಾಗಾರದಲ್ಲಿ (ಎಫ್‌ಒಡಿ) ನಡೆದ ಅವಘಡವನ್ನು ನೆನಪು ಮಾಡುವಂತಿದೆ.
ಸಂಘರ್ಷಪೀಡಿತ ಪ್ರದೇಶಗಳಲ್ಲಿ ವಶಕ್ಕೆ ಪಡೆಯುವ ಸ್ಫೋಟಕಗಳನ್ನು ಸಂಗ್ರಹಿಸುವ ಮತ್ತು ಪರಿಶೀಲಿಸುವ ವಿಧಾನದಲ್ಲಿ ಬದಲಾವಣೆ ಬೇಕೆಂದು ಎರಡೂ ಘಟನೆಗಳು ಒತ್ತಿ ಹೇಳುತ್ತಿವೆ.
ಕಾರ್ಯಾಚರಣೆ ವೇಳೆ ವಶಕ್ಕೆ ಪಡೆದಿದ್ದ ಶಸ್ತ್ರಾಸ್ತ್ರ, ಸ್ಫೋಟಕಗಳನ್ನು 15 ಕೋರ್ ಮುಖ್ಯ ಕಚೇರಿಯಲ್ಲಿ ಸಂಗ್ರಹಿಸಿಡಲಾಗಿತ್ತು. 1994ರ ಮಾರ್ಚ್ 29ರಂದು ಸೇನಾ ಸಿಬ್ಬಂದಿ ಇವುಗಳ ಪರಿಶೀಲನೆ ನಡೆಸುತ್ತಿ ದ್ದಾಗ ಸ್ಫೋಟ ಸಂಭವಿಸಿ 13 ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಸಂಸದೀಯ ದಾಖಲೆಗಳಲ್ಲಿ ತಿಳಿಸಲಾಗಿದೆ. ಆದರೆ 15 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳಿವೆ.
‘ನೌಗಾಮ್ ಠಾಣೆಯಲ್ಲಿ ನಡೆದ ಸ್ಫೋಟವು ಆಕಸ್ಮಿಕ. ಇದು ವಿಧ್ವಂಸಕ ಕೃತ್ಯ ಅಲ್ಲ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ಈ ದುರಂತವು, ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸ್ಫೋಟಕ ಗಳನ್ನು ವಶಕ್ಕೆ ಪಡೆದಿದ್ದರೂ, ಅವುಗಳ ನಿರ್ವಹಣೆ ವಿಚಾರದಲ್ಲಿ ಮಾರ್ಗಸೂಚಿ ಪಾಲನೆ ಆಗಿಲ್ಲ ಏಕೆ ಎಂಬ ಪ್ರಶ್ನೆಯನ್ನು ಎತ್ತಿದೆ.
ವೈದ್ಯರು ಸೇರಿ ಮೂವರು ವಶಕ್ಕೆ
ಹರಿಯಾಣದ ಅಲ್ ಫಲಾಹ್ ವಿಶ್ವವಿದ್ಯಾಲಯದ ಇಬ್ಬರು ವೈದ್ಯರು ಸೇರಿದಂತೆ ಮೂವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದ ವೈದ್ಯರನ್ನು ಮಹಮ್ಮದ್ ಮತ್ತು ಮುಸ್ತಾಕೀಮ್ ಎಂದು ಗುರುತಿಸಲಾಗಿದೆ. ಇನ್ನೊಬ್ಬ ವ್ಯಕ್ತಿಯನ್ನು ದಿನೇಶ್ ಅಲಿಯಾಸ್ ದಬ್ಬು ಎಂದು ಗುರುತಿಸಲಾಗಿದ್ದು, ಈತ ಪರವಾನಗಿ ಇಲ್ಲದೆಯೂ ರಾಸಾಯನಿಕ ಗೊಬ್ಬರ ವಿತರಿಸು ತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ದೆಹಲಿ ಪೊಲೀಸ್ ವಿಶೇಷ ಘಟಕ ಮತ್ತು ಎನ್‌ಐಎ ಹರಿಯಾಣದ ವಿವಿಧೆಡೆ ನಡೆಸಿದ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.
‘ಈ ಇಬ್ಬರೂ ವೈದ್ಯರು, ಕೆಂಪು ಕೋಟೆ ಸಮೀಪ ಸ್ಫೋಟಗೊಂಡ ಕಾರಿನ ಚಾಲಕ ಡಾ.ಉಮರ್ ನಬಿಯ ನಿಕಟವರ್ತಿಗಳು ಮತ್ತು ಬಂಧಿತ ಡಾ.ಮುಜಮ್ಮಿಲ್ ಗನಿ ಜತೆ ಸಂಪರ್ಕದಲ್ಲಿದ್ದರು. ಈ ಪೈಕಿ ಒಬ್ಬ ವೈದ್ಯ ಕೆಂಪುಕೋಟೆ ಸಮೀಪ ಸ್ಫೋಟ ಸಂಭವಿಸಿದ ದಿನ ದೆಹಲಿಯಲ್ಲಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಏಮ್ಸ್ ಸಂದರ್ಶನದಲ್ಲಿ ಪಾಲ್ಗೊಳ್ಳಲು ಬಂದಿದ್ದಾಗಿ ಆತ ತಿಳಿಸಿದ್ದಾನೆ’ ಎಂದು ಎಂದು ಮೂಲಗಳು ತಿಳಿಸಿವೆ.
ಸ್ಫೋಟ ಸಂಭವಿಸಿದ ದಿನ ಉಮರ್ ಕಾರು ನಿಲ್ಲಿಸಿ ಚಹಾ ಕುಡಿದಿದ್ದ ಅಂಗಡಿಯ ಮಾಲೀಕ ಸೇರಿದಂತೆ ಹಲವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.